ಕಾಂಗ್ರೆಸ್ ತೊರೆದ ಉತ್ತರ ಪ್ರದೇಶದ ಮಾಜಿ ಶಾಸಕ ಲಲಿತೇಶಪತಿ ತ್ರಿಪಾಠಿ

photo: twitter
ಲಕ್ನೊ: ಕಾಂಗ್ರೆಸ್ ನ ಇನ್ನೋರ್ವ ಪ್ರಮುಖ ಬ್ರಾಹ್ಮಣ ನಾಯಕ, ಮಾಜಿ ಶಾಸಕ ಲಲಿತೇಶಪತಿ ತ್ರಿಪಾಠಿ ಗುರುವಾರ ಪಕ್ಷ ತೊರೆದರು.
ಇಂದಿರಾ ಗಾಂಧಿಯವರ ಕಾಲದಿಂದ ಪಕ್ಷಕ್ಕಾಗಿ ತ್ಯಾಗ ಮಾಡಿದವರಿಗೆ ಸೂಕ್ತ ಗೌರವ ನೀಡಲಿಲ್ಲ ಹಾಗೂ ಅವರಿಗಾಗಿ ಹೋರಾಡಲು ಸಾಧ್ಯವಾಗದೇ ನಾನು ಅಸಹಾಯಕನಾಗಿದ್ದೇನೆ ಎಂದು ತ್ರಿಪಾಠಿ ಹೇಳಿದರು.
ಲಲಿತೇಶಪತಿ ತ್ರಿಪಾಠಿ ಕಾಂಗ್ರೆಸ್ನ ಉತ್ತರಪ್ರದೇಶ ಘಟಕದ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಲಲಿತೇಶಪತಿ ಮಾಜಿ ಸಿಎಂ ಕಮಲಪತಿ ತ್ರಿಪಾಠಿಯವರ ಮೊಮ್ಮಗ. ಅವರ ಕುಟುಂಬದ ನಾಲ್ಕು ತಲೆಮಾರುಗಳು ಕಾಂಗ್ರೆಸ್ ಜೊತೆ ಸಂಬಂಧ ಹೊಂದಿವೆ.
"ಕಾಂಗ್ರೆಸ್ನಲ್ಲಿ ಉಳಿಯಲು ನನಗೆ ಇನ್ನು ಮುಂದೆ ಯಾವುದೇ ತರ್ಕ ಉಳಿದಿಲ್ಲ ... ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಬಂಧ ಹೊಂದಿದ್ದ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಪಕ್ಷದೊಂದಿಗೆ ನಿಂತ ಅನೇಕ ಪಕ್ಷದ ಕಾರ್ಯಕರ್ತರು ಇಂದಿರಾ ಗಾಂಧಿಯೊಂದಿಗೆ ನಿಂತರು. ಅವರಿಗಾಗಿ ಹೋರಾಡಲು ನನಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ'' ಎಂದು ಲಲಿತೇಶಪತಿ ವಾರಾಣಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವದ ಬಗ್ಗೆ ನನಗೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಲಲಿತೇಶಪತಿ ಹೇಳಿದರು.
ನೀವು ಬೇರೆ ಪಕ್ಷಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ, ತ್ರಿಪಾಠಿ ಅವರು ಮೊದಲು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಈ ಹಿಂದೆ ಮಾಜಿ ಕೇಂದ್ರ ಸಚಿವ, ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ ಅವರು ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು