ದ್ವೇಷ ಭಾಷಣ ಪ್ರಕರಣ:ಜಂತರ್ ಮಂತರ್ ಕಾರ್ಯಕ್ರಮದ ಆಯೋಜಕನಿಗೆ ಜಾಮೀನು ನೀಡಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಜಂತರ್ ಮಂತರ್‌ನಲ್ಲಿ ಕಳೆದ ತಿಂಗಳು ಕೋಮು ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳಲಾದ ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ಪ್ರೀತ್ ಸಿಂಗ್ ಗೆ ದಿಲ್ಲಿ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಅರ್ಜಿಯನ್ನು ಅನುಮತಿಸಲಾಗಿದೆ. ಅರ್ಜಿದಾರರಿಗೆ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಹೇಳಿದರು.
ಬಂಧಿತನಾದ ನಂತರ ಆಗಸ್ಟ್ 10 ರಂದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸಿಂಗ್ ವಿರುದ್ದ ಆಗಸ್ಟ್ 8 ರಂದು ಇಲ್ಲಿನ ಜಂತರ್ ಮಂತರ್ ನಲ್ಲಿ ನಡೆದ ರ್ಯಾಲಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಹಾಗೂ ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚಾರ ಮಾಡಲು ಯುವಕರನ್ನು ಪ್ರಚೋದಿಸಿದ ಆರೋಪವಿದೆ.
ವಕೀಲ ವಿಷ್ಣು ಶಂಕರ್ ಜೈನ್ ಅವರ ಮೂಲಕ ಮನವಿ ಸಲ್ಲಿಸಿದ ಸಿಂಗ್, ತಾನು ಯಾವುದೇ ಉದ್ಧಟತನದ ಭಾಷಣ ಅಥವಾ ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧ ಯಾವುದೇ ಘೋಷಣೆ ಕೂಗುವುದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾನೆ.
ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಬೇಡಿಕೆಯು ಐಪಿಸಿಯ ಸೆಕ್ಷನ್ 153 ಎ (ದ್ವೇಷದ ಭಾಷಣ) ವನ್ನು ಆಕರ್ಷಿಸುವುದಿಲ್ಲ ಹಾಗೂ ಘೋಷಣೆಯ ಸಮಯದಲ್ಲಿ ಆತ ಆ ಸ್ಥಳದಲ್ಲಿ ಇರಲಿಲ್ಲ ಎಂದು ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಪಾದಿಸಿದರು.
ಆಗಸ್ಟ್ 27 ರಂದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಆಂಟಿಲ್ ಅವರು ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಬಂಧಿಸಲ್ಪಟ್ಟಿದ್ದ,ಸಿಂಗ್ ಗೆ ಜಾಮೀನು ನಿರಾಕರಿಸಿದ್ದರು.