ದಿಲ್ಲಿ ನ್ಯಾಯಾಲಯದ ಆವರಣದಲ್ಲಿ ನಡೆದ ಶೂಟೌಟ್ನಲ್ಲಿ ಗ್ಯಾಂಗ್ ಸ್ಟರ್ ಸಹಿತ ನಾಲ್ವರ ಹತ್ಯೆ

photo: twitter@mahendermanral
ಹೊಸದಿಲ್ಲಿ,ಸೆ.24: ಕುಖ್ಯಾತ ಗ್ಯಾಂಗ್ಸ್ಟರ್ ಜಿತೇಂದರ್ ಮಾನ್ ಅಲಿಯಾಸ್ ಜಿತೇಂದರ್ ಗೋಗಿಯನ್ನು ಶುಕ್ರವಾರ ಕಿಕ್ಕಿರಿದು ತುಂಬಿದ್ದ ಉತ್ತರ ದಿಲ್ಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಬೆಂಗಾವಲು ಪೊಲೀಸರು ನಡೆಸಿದ್ದ ಪ್ರತಿದಾಳಿಯಲ್ಲಿ ಇಬ್ಬರು ಹಂತಕರೂ ಸಾವನ್ನಪ್ಪಿದ್ದಾರೆ.
ಹಾಡಹಗಲೇ,ಅದೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ನಡೆದಿರುವ ಈ ಭೀಕರ ಗುಂಡಿನ ಕಾಳಗ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದು,ನ್ಯಾಯಾಲಯಗಳಲ್ಲಿ ಇರಬೇಕಾದ ಬಿಗಿಭದ್ರತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಗುಂಡು ಹಾರಾಟದ ವೇಳೆ ಪೊಲೀಸರು ಮತ್ತು ವಕೀಲರು ಜೀವವುಉಸಿಕೊಳ್ಳಲು ಕಟ್ಟಡದಲ್ಲಿ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳು ವೀಡಿಯೋದಲ್ಲಿ ದಾಖಲಾಗಿವೆ.
ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಎಪ್ರಿಲ್ನಲ್ಲಿ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು ತಿಹಾರ ಜೈಲಿನಲ್ಲಿದ್ದ ಗೋಗಿಯನ್ನು ಶುಕ್ರವಾರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಕೋರ್ಟ್ ರೂಮಿನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಕಾರಿಡಾರ್ಗೆ ನುಗ್ಗಿದ್ದ ವಕೀಲರ ವೇಷದಲ್ಲಿದ್ದ ವಿರೋಧಿ ಗ್ಯಾಂಗ್ನ ಪಾತಕಿಗಳಿಬ್ಬರು ಗೋಗಿಯನ್ನು ಗುರಿಯಾಗಿಸಿಕೊಂಡು ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದರು. ಗೋಗಿಗೆ ಬೆಂಗಾವಲಾಗಿದ್ದ ವಿಶೇಷ ಪಡೆಯ ಸಿಬ್ಬಂದಿಗಳು ಪ್ರತಿದಾಳಿ ನಡೆಸಿದಾಗ ಹಂತಕರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಗಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ‘ಟಿಲ್ಲು ಗ್ಯಾಂಗ್ ’ ಎಂಬ ವಿರೋಧಿ ಗುಂಪು ಗೋಗಿಯ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಪೊಲೀಸರು ತಿಳಿಸಿದರು.
ಶತ್ರು ಗ್ಯಾಂಗ್ನ ಇಬ್ಬರು ಗೋಗಿಯ ಮೇಲೆ ಗುಂಡು ಹಾರಿಸಿದ್ದು,ಚುರುಕಾಗಿ ಕಾರ್ಯ ನಿರ್ವಹಿಸಿದ ಪೊಲೀಸರು ಪ್ರತಿದಾಳಿ ನಡೆಸಿ ಅವರನ್ನು ಕೊಂದಿದ್ದಾರೆ. ಗೋಗಿ ಸೇರಿದಂತೆ ಒಟ್ಟು ಮೂವರು ಕೊಲ್ಲಲ್ಪಟ್ಟಿದ್ದಾರೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ತಿಳಿಸಿದರು.
ಇಂದಿನ ಘಟನೆಯು ನ್ಯಾಯಾಲಯ ಆವರಣಗಳಲ್ಲಿ ಗಂಭೀರ ಭದ್ರತಾ ಲೋಪವನ್ನು ಬೆಟ್ಟು ಮಾಡಿದೆ.
ನ್ಯಾಯಾಧೀಶರು,ವಕೀಲರು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಗೋಗಿಯೂ ಅಲ್ಲಿದ್ದ. ವಕೀಲರ ಸೋಗಿನಲ್ಲಿದ್ದ ಇಬ್ಬರು ಕಾರಿಡಾರ್ ಪ್ರವೇಶಿಸಿ ಗುಂಡು ಹಾರಾಟ ಆರಂಭಿಸಿದ್ದರು. ಓರ್ವ ಯುವ ನ್ಯಾಯವಾದಿಯೂ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ವಕೀಲ ಲಲಿತ್ ಕುಮಾರ್ ತಿಳಿಸಿದರು.
ವರ್ಷಗಳಿಂದಲೂ ಗೋಗಿ ಗ್ಯಾಂಗ್ ಮತ್ತು ಟಿಲ್ಲು ಗ್ಯಾಂಗ್ ನಡುವೆ ವೈರತ್ವವಿದ್ದು,ಅವುಗಳ ನಡುವಿನ ಕದನದಲ್ಲಿ 25ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದಾರೆ.
ನ್ಯಾಯಾಲಯದಲ್ಲಿ ಅಳವಡಿಸಲಾಗಿರುವ ಲೋಹ ಪತ್ತೆ ಯಂತ್ರಗಳು ಕೆಲಸ ಮಾಡುತ್ತಿದ್ದವೇ ಮತ್ತು ಅವು ಕೆಲಸ ಮಾಡುತ್ತಿದ್ದರೆ ಪಿಸ್ತೂಲುಗಳನ್ನು ಹೊಂದಿದ್ದ ಇಬ್ಬರು ಒಳಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
‘ನ್ಯಾಯಾಲಯದ ಆವರಣದಲ್ಲಿಯ ಲೋಹ ಪತ್ತೆ ಯಂತ್ರಗಳು ಕೆಲಸ ಮಾಡುತ್ತಿದ್ದವೇ ಇಲ್ಲವೇ ಎನ್ನುವುದು ತನಿಖೆಯ ವಿಷಯವಾಗಿದೆ ಮತ್ತು ಸದ್ಯಕ್ಕೆ ನಾನು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾವೀಗಾಗಲೇ ಪ್ರಕರಣದ ತನಿಖೆಯನ್ನು ಆರಂಭಿಸಿದ್ದೇವೆ ಮತ್ತು ಈ ಶೂಟೌಟ್ನಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ನಾವು ಬಿಡುವುದಿಲ್ಲ ’ಎಂದು ಅಸ್ಥಾನಾ ಸುದ್ದಿಗಾರರಿಗೆ ತಿಳಿಸಿದರು.
‘ದಿಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ಗಂಭೀರವಾಗಿ ನಿರ್ವಹಿಸುತ್ತಿದ್ದಾರೆ. ನಾವು ಪರಿಣಾಮಕಾರಿಯಾಗಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಹೀಗಾಗಿಯೇ ಹಂತಕರ ಕಥೆ ಮುಗಿಸಲು ಸಾಧ್ಯವಾಗಿದೆ ’ಎಂದೂ ಅವರು ಹೇಳಿದರು.
ಯಾರು ಈ ಜಿತೇಂದರ್ ಗೋಗಿ?
‘ಮೋಸ್ಟ್ ವಾಂಟೆಡ್’ಗ್ಯಾಂಗ್ಸ್ಟರ್ ಆಗಿದ್ದ ಗೋಗಿಯನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕವು ಎಪ್ರಿಲ್ನಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಮ್ಕೋಕಾ)ಯಡಿ ಬಂಧಿಸಿದ್ದು,ಆಗಿನಿಂದಲೂ ಆತ ದಿಲ್ಲಿಯ ತಿಹಾರ ಜೈಲಿನಲ್ಲಿದ್ದ. ಈ ಕಾಯ್ದೆಯಡಿ ಆತನ ವಿರುದ್ಧ 19 ಕೊಲೆ ಮತ್ತು ಕೊಲೆಯತ್ನ,ಡಝನ್ಗಟ್ಟಲೆ ಹಫ್ತಾ ವಸೂಲಿ,ದರೋಡೆ,ಕಾರು ಅಪಹರಣ,ಲೂಟಿ ಪ್ರಕರಣಗಳು ದಾಖಲಾಗಿದ್ದವು. 2017 ಫೆಬ್ರವರಿಯಲ್ಲಿ ಅಲಿಗಡದ ದೇವೇಂದ್ರ ಪ್ರಧಾನ ಎಂಬಾತನ ಹತ್ಯೆಗೈದಿದ್ದ. ಪ್ರಧಾನನ ಮಗ ತನ್ನ ಸಹಚರ ನಿರಂಜನ ಎಂಬಾತನ ಹತ್ಯೆಯಲ್ಲಿ ಭಾಗಿಯಾಗಿದ್ದು ಇದಕ್ಕೆ ಕಾರಣವಾಗಿತ್ತು.
ಸಹಚರ ದಿನೇಶ್ ಕಲಾರಾ ವಿರುದ್ಧದ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಹರ್ಯಾಣದ ಜನಪ್ರಿಯ ಜಾನಪದ ಗಾಯಕಿ ಹರ್ಷಿತಾ ದಹಿಯಾರನ್ನು ಅಕ್ಟೋಬರ್ನಲ್ಲಿ ಕೊಲೆ ಮಾಡಿದ್ದ. ನವಂಬರ್ನಲ್ಲಿ ಕಾರ್ಪೊರೇಷನ್ ಅಧೀನದ ಶಾಲೆಯೊಂದರ ಹೊರಗೆ ಶಿಕ್ಷಕ ದೀಪಕ್ ಮತ್ತು ಜನವರಿಯಲ್ಲಿ ಪ್ರಶಾಂತ್ ವಿಹಾರದಲ್ಲಿ ರವಿ ಭಾರದ್ವಾಜ್ ಎನ್ನುವವರನ್ನೂ ಹತ್ಯೆ ಮಾಡಿದ್ದ.
ಶಾಲೆಯನ್ನು ಅರ್ಧಕ್ಕೇ ಬಿಟ್ಟಿದ್ದ ಗೋಗಿ ಬಳಿಕ ಆಸ್ತಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. 2010ರಲ್ಲಿ ತಂದೆಯ ನಿಧನದ ಬಳಿಕ ಅಪರಾಧ ಲೋಕವನ್ನು ಪ್ರವೇಶಿಸಿದ್ದ.
ಗೋಗಿಯ ಹಂತಕರ ಪೈಕಿ ಓರ್ವ ತನ್ನ ತಲೆಯ ಮೇಲೆ 50,000 ರೂ.ಗಳ ಬಹುಮಾನವನ್ನು ಹೊತ್ತಿದ್ದ.
#JUSTIN:Dreaded jailer gangster Jitender Maan alias Gogi was shot dead by two armed assailants of rival jailed gangster, Sunil alias Tillu Tajpuriya inside the Rohini Court on Friday afternoon. Attackers killed by the Delhi Police.@IndianExpress pic.twitter.com/PDbGvFziaH
— Mahender Singh Manral (@mahendermanral) September 24, 2021







