ಪಿರಿಯಾಪಟ್ಟಣ: ಸಂಸದ ಪ್ರತಾಪ ಸಿಂಹರಿಗೆ ಘೇರಾವ್ ಹಾಕಿದ ರೈತರು

Photo credit: Twitter@mepratap
ಮೈಸೂರು, ಸೆ.24: ತಂಬಾಕು ಹರಾಜು ಪೂಜೆಗೆ ಆಗಮಿಸಿದ ಸಂಸದ ಪ್ರತಾಪ ಸಿಂಹ ಅವರನ್ನು ರೈತರು ತರಾಟೆಗೆ ತೆಗೆದುಕೊಂಡು ಘೇರಾವ್ ಹಾಕಿದ ಘಟನೆ ಪಿರಿಯಾಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಮಾರುಕಟ್ಟೆಯಲ್ಲಿ ಶುಕ್ರವಾರ ತಂಬಾಕು ಹರಾಜು ಪೂಜೆ ಏರ್ಪಡಿಸಲಾಗಿತ್ತು. ಬೆಳಗ್ಗೆ 6:30ಕ್ಕೆ ಪೂಜೆ ಸಲ್ಲಿಸಲು ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಸೇರಿದಂತೆ ಅಧಿಕಾರಗಳೊಂದಿಗೆ ಆಗಮಿಸಿದ ಸಂಸದ ಪ್ರತಾಪ ಸಿಂಹರನ್ನು ರೈತರು "ಇಷ್ಟು ಬೆಳಗ್ಗೆ ಏಕೆ ಹರಾಜು ಪೂಜೆ ನಡೆಸುತ್ತಿದ್ದೀರಿ" ಎಂದು ಪ್ರಶ್ನಿಸಿದ್ದಾರೆ. "ಒಳ್ಳೆಯ ಮುಹೂರ್ತ ಇರುವ ಕಾರಣ ಇಷ್ಟು ಬೇಗ ಪೂಜೆ ಮಾಡಲಾಗುತ್ತಿದೆ" ಎಂದು ಸಂಸದರು ಹೇಳಿದ್ದಾರೆ. ಇದರಿಂದ ಕೋಪಗೊಂಡ ರೈತರು, ತಂಬಾಕಿಗೆ ಸರಿಯಾದ ಬೆಂಬಲ ಬೆಲೆ ಕೊಡಿಸಲು ನಿಮಗೆ ಆಗಲಿಲ್ಲ, ತಂಬಾಕು ಹರಾಜು ಬೆಲೆಯನ್ನು 180 ರೂ.ಗೆ ನಿಗದಿಪಡಿಸಲಾಗಿದೆ. ತಂಬಾಕು ರೈತರ ಸಮಸ್ಯೆ ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ಘೇರಾವ್ ಮಾಡಿದರು.
ರೈತರು ಪ್ರಶ್ನೆ ಮಾಡುತ್ತಿದ್ದಂತೆ ತಬ್ಬಿಬ್ಬಾದ ಸಂಸದರು ಸ್ಥಳದಿಂದ ತೆರಳಿದರು.





