ಕೃಷಿ ಕಾಯ್ದೆಗಳ ಬಗ್ಗೆ ಮೋದಿ ಜೊತೆ ಚರ್ಚಿಸುವಂತೆ ಬೈಡೆನ್ ಗೆ ರೈತನಾಯಕ ರಾಕೇಶ್ ಟಿಕಾಯತ್ ಕರೆ

ಹೊಸದಿಲ್ಲಿ,ಸೆ.24: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿ ಸಂದರ್ಭದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ಬಗ್ಗೆ ಅವರೊಂದಿಗೆ ಚರ್ಚಿಸುವಂತೆ ರೈತನಾಯಕ ರಾಕೇಶ್ ಟಿಕಾಯತ್ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರನ್ನು ಆಗ್ರಹಿಸಿದ್ದಾರೆ.
ಐದು ದಿನಗಳ ಅಮೆರಿಕ ಪ್ರವಾಸವನ್ನು ಕೈಗೊಂಡಿರುವ ಮೋದಿ ಬೈಡೆನ್ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.ಉಭಯ ನಾಯಕರು ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರಧಾನಿಗಳೊಂದಿಗೆ ಕ್ವಾಡ್ ಗುಂಪಿನ ಪ್ರಥಮ ಮುಖತಃ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
‘ನಾವು ಭಾರತೀಯ ರೈತರು ಪ್ರಧಾನಿ ಮೋದಿ ಸರಕಾರವು ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಕಳೆದ 11 ತಿಂಗಳುಗಳ ಪ್ರತಿಭಟನೆ ಸಂದರ್ಭದಲ್ಲಿ 700 ರೈತರು ಮೃತಪಟ್ಟಿದ್ದಾರೆ. ನಮ್ಮನ್ನು ಉಳಿಸಲು ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕು. ಪ್ರಧಾನಿ ಮೋದಿ ಜೊತೆ ಭೇಟಿ ಸಂದರ್ಭದಲ್ಲಿ ನಮ್ಮ ಕಳವಳಗಳ ಬಗ್ಗೆ ಗಮನ ಹರಿಸಿ’ ಎಂದು ಶುಕ್ರವಾರ ಟ್ವೀಟಿಸಿರುವ ಟಿಕಾಯತ್ ಅದನ್ನು ಬೈಡೆನ್ ಗೆ ಟ್ಯಾಗ್ ಮಾಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಅಮೆರಿಕವು ಕೃಷಿಕಾಯ್ದೆಗಳ ಕುರಿತು ರೈತರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಮೋದಿ ಸರಕಾರವನ್ನು ಆಗ್ರಹಿಸಿತ್ತು.