ಅನಧಿಕೃತ ಬಡಾವಣೆ ನಿರ್ಮಿಸಿದರೆ ಕ್ರಿಮಿನಲ್ ಕೇಸ್ ದಾಖಲೆಗೆ ಚಿಂತನೆ: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್

ಬೆಂಗಳೂರು, ಸೆ. 24: `ರಾಜ್ಯದಲ್ಲಿ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಬಡಾವಣೆಗಳನ್ನು ನಿರ್ಮಿಸಿದರೆ ಅವುಗಳನ್ನು ರದ್ದುಪಡಿಸಿ, ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ' ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಅಮೃತದೇಸಾಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಈಗಾಗಲೇ ಇಲಾಖೆವತಿಯಿಂದ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ಯಾವ ಭಾಗಗಳಲ್ಲಿ ಅನಕೃತವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದಾರೆಂಬ ಬಗ್ಗೆ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಮಾಹಿತಿ ನೀಡಿದರು.
`ಒಂದು ವೇಳೆ ಸ್ಥಳೀಯ ಪ್ರಾಧಿಕಾರ ಇಲ್ಲವೆ, ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೇ ನಿರ್ಮಿಸಿದ್ದರೆ, ಅವುಗಳನ್ನು ರದ್ದುಪಡಿಸಲಾಗುವುದು. ಒಂದು ವೇಳೆ ಅಧಿಕಾರಿಗಳು ಭಾಗಿಯಾಗಿದ್ದರೆ, ಅವರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಅವರು ಎಚ್ಚರಿಕೆ ನೀಡಿದರು.
`ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಅಧಿಕಾರಿಗಳ ಸಭೆ ನಡೆಸಿ, ಅನಧಿಕೃತ ಬಡಾವಣೆಗಳಿಗೆ ಅನುಮತಿ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಯಾವುದೇ ಒತ್ತಡ, ಮುಲಾಜಿಗೆ ಒಳಗಾಗದಂತೆ ನಿದೇರ್ಶಿಸಿದ್ದೇನೆ. ಇಷ್ಟಾಗಿಯೂ ಅಧಿಕಾರಿಗಳು ಅನಧಿಕೃತ ಬಡಾವಣೆ ನಿರ್ಮಿಸುವವರಿಗೆ ಬೆಂಬಲ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ' ಎಂದು ಬಸವರಾಜ್ ಎಚ್ಚರಿಕೆ ನೀಡಿದರು.
`ಅನಧಿಕೃತ ಬಡಾವಣೆಗಳಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಯಾವುದೇ ರೀತಿಯ ಮೂಲಸೌಲಭ್ಯಗಳನ್ನು ನೀಡುವುದಿಲ್ಲ. ಅಲ್ಲದೆ, ಯಾವುದೇ ಅನಧಿಕೃತ ಬಡಾವಣೆಗಳನ್ನು ಅಧಿಕೃತವಾಗಿಸಲು ಪ್ರಸ್ತುತ ಅವಕಾಶ ಇಲ್ಲ ಎಂದು ಬಸವರಾಜ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‍ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, `ರಾಜ್ಯದಲ್ಲಿ ಸಾವಿರಾರು ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಅವರಿಗೆ ಹೇಳುವವರು, ಕೇಳುವವರೂ ಇಲ್ಲ. ನಿವೇಶನ ನೀಡುವ ಭರವಸೆ ನೀಡಿ ಕೋಟ್ಯಂತರ ರೂ.ಹಣ ಪಡೆಯುತ್ತಾರೆ. ಕನಿಷ್ಠ ಮೂಲಸೌಲಭ್ಯ ಕಲ್ಪಿಸುವುದಿಲ್ಲ. ಕೊನೆಗೆ ಒಂದು ದಿನ ಹಣದೊಂದಿಗೆ ಪರಾರಿಯಾಗುತ್ತಾರೆ. ಕೃಷಿ ಜಮೀನಿನಲ್ಲೇ ಬಡಾವಣೆ ನಿರ್ಮಿಸಿದ್ದಾರೆ. ಎಷ್ಟು ಜನರ ಮೇಲೆ ಕ್ರಮ ಕೈಗೊಂಡಿದ್ದೀರಿ' ಎಂದು ಪ್ರಶ್ನಿಸಿದರು.
`ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಈ ಕುರಿತು ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಸದಸ್ಯರಿಗೆ ಅನಧಿಕೃತ ಬಡಾವಣೆಗಳ ಬಗ್ಗೆ ನಿರ್ದಿಷ್ಟ ಪ್ರಕರಣಗಳಿದ್ದರೆ, ನನ್ನ ಗಮನ್ಕಕೆ ತಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಸವರಾಜ್ ಇದೇ ವೇಳೆ ಭರವಸೆಯನ್ನು ನೀಡಿದರು.







