ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಾಧಕರಿಗೆ ಸನ್ಮಾನ

ಮಂಗಳೂರು, ಸೆ.24: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಇಂದು ಸಮಾಜದಲ್ಲಿ ನೊಂದವರ, ಕಷ್ಟದಲ್ಲಿರುವವರ ನೆರಳಾಗಿದೆ. ನಮಗಿಂದು ಸಂಪತ್ತು ಗಳಿಸಲು ನೂರಾರು ದಾರಿಯಿದೆ. ಆದರೆ ಮಾಡಿದ ಸಂಪತ್ತಿನಲ್ಲಿ ಬಡವರಿಗೆ ದಾನ ಮಾಡೋ ಮನಸ್ಸಿರುವವರು ಸಿಗುವುದು ತುಂಬಾ ಕಡಿಮೆ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದಾನ ಸಂಗ್ರಹಿಸಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ನೀಡುವ ಮೂಲಕ ಸಮಾಜಕ್ಕೆ ನೆರಳಾಗಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ನಗರದ ಬಂಟ್ಸ್ ಹಾಸ್ಟೇಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ, ಚಿತ್ರ, ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಲಯನ್ಸ್ ಗವರ್ನರ್ ವಸಂತ ಶೆಟ್ಟಿ, ಒಕ್ಕೂಟದ ಪೋಷಕ ರತ್ನಾಕರ ಶೆಟ್ಟಿ ಮುಂಡ್ಕೂರು, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.
ಪತ್ರಕರ್ತರಾದ ಮಾಲತಿ ಶೆಟ್ಟಿ ಮಾಣೂರು ಮತ್ತು ನಿಶಾಂತ್ ಶೆಟ್ಟಿ ಕಿಲೆಂಜೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ 10 ಫಲಾನುಭವಿಗಳಿಗೆ, ಶಿಕ್ಷಣ ಕ್ಷೇತ್ರದ 6 ಫಲಾನುಭವಿಗಳಿಗೆ, ಮೂವರ ಮದುವೆಗೆ, ಮನೆ ನಿರ್ಮಾಣ ಹಾಗೂ ಮನೆ ರಿಪೇರಿಗೆ 18 ಮಂದಿ ಫಲಾನುಭವಿಗಳಿಗೆ ಸುಮಾರು 12 ಲ.ರೂ ವನ್ನು ವಿತರಿಸಲಾಯಿತು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಫಲಾನುಭವಿಗಳ ಹೆಸರು ವಾಚಿಸಿದರು. ಕೊಲ್ಲಾಡಿ ಬಾಲಕೃಷ್ಣ ರೈ, ಸಾಯಿನಾಥ್ ಶೆಟ್ಟಿ ಮುಂಡ್ಕೂರು ಸನ್ಮಾನ ಪತ್ರ ವಾಚಿಸಿದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವಂದಿಸಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥನೆಗೈದರು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.







