ಉಡುಪಿ: ರವಿವಾರ ರಾಜಾಂಗಣದಲ್ಲಿ ವಿವಿಧ ಯಕ್ಷಗಾನ ಪ್ರಶಸ್ತಿ ಪ್ರದಾನ
ಉಡುಪಿ, ಸೆ.24: ಉಡುಪಿ ಯಕ್ಷಗಾನ ಕಲಾರಂಗವು ಪ್ರತಿ ವರ್ಷ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್‌ರಿಗೆ ಸೆ.26ರ ರವಿವಾರ ಸಂಜೆ 4:00ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದಾನ ಮಾಡಲಾಗುವುದು.
ಇದರೊಂದಿಗೆ ಕಲಾಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಅನುಕ್ರಮವಾಗಿ ಹಿರಿಯ ಅರ್ಥಧಾರಿಗಳಾದ ವಾಸುದೇವ ರಾವ್ ಸುರತ್ಕಲ್ ಹಾಗೂ ಉಮಾಕಾಂತ ಭಟ್ಟ ಕೆರೇಕೈ ಇವರಿಗೆ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳೂರು ವಿಶವ್ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕೊಲ್ಲೂರು ಶ್ರೀಮೂಕಾಂಬಿಕ ದೇವಳದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಭಾಗವಸಹಿಲಿದ್ದಾರೆ.
ಕಾರ್ಯಕ್ರಮದ ಪೂರ್ವದಲ್ಲಿ ಅಪರಾಹ್ನ 1:45ಕ್ಕೆ ಕರ್ಗಲ್ಲು ವಿಶ್ವೇಶ್ವರ ಭಟ್ಟರ ನಾಟ್ಯ ಪ್ರಾತ್ಯಕ್ಷಿಕೆ ಬಳಿಕ 3:00ರಿಂದ 4:00ರವರೆಗೆ ತಾಳಮದ್ದಲೆ ’ಕನಸ ಕಂಡನು ಕಂಸ’ ಪ್ರಸ್ತುತಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳು ಸಿ4ಯು ಚಾನಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







