ಮತಾಂತರದ ಕಾಯ್ದೆ ಬಗ್ಗೆ ಪಾದ್ರಿಗಳಿಗೆ ಏಕೆ ಭಯ: ಸಂಸದ ಪ್ರತಾಪ್ ಸಿಂಹ

ಮೈಸೂರು,ಸೆ.24: ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲಾಗುವುದು ಎಂಬ ಭಯದಿಂದ ಪಾದ್ರಿಗಳು ಒದ್ದಾಡುತ್ತಿದ್ದು, ಮತಾಂತರದ ವಿರುದ್ಧ ನಾವಿದ್ದೇವೆ ಎಂದ ಮೇಲೆ ಪಾದ್ರಿಗಳಿಗೆ ಏಕೆ ಭಯ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ನಗರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಾಂತರ ರಾಜ್ಯದಲ್ಲಿ ಮತ್ತು ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಜನರನ್ನು ಮೋಸ ಮಾಡಿ ಮತಾಂತರ ಮಾಡುವವರನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದರು.
ಮೊದಲಿಗೆ ಜನರಿಗೆ ನಂಬಿಕೆ ಬರುವಂತೆ ಮಾಡಿ ನಂತರ ಅವರನ್ನು ಮತಾಂತರ ಮಾಡುವ ಕೆಲಸ ಮಾಡಲಾಗುತ್ತಿದೆ. ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯೇ ಮತಾಂತರಗೊಂಡಿರುವ ಬಗ್ಗೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಮೋಸ, ಮರುಳು, ಮೋಡಿ ಮಾಡಿ ಮತಾಂತರಕ್ಕೆ ಯತ್ನಿಸಲಾಗುತ್ತಿದೆ. ಇದರಿಂದ ಸರ್ಕಾರ ಕಾಯ್ದೆ ತರಲು ಹೊರಟಿದೆ. ಆದರೆ ಬಿಷಪ್‍ಗಳು, ಪಾದ್ರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತಾಂತರದ ವಿರುದ್ಧ ನಾವಿದ್ದೇವೆ ಎಂದ ಮೇಲೆ ಇವರಿಗೇಕೆ ಭಯ, ನಾವು ಮತಾಂತರ ಮಾಡುತ್ತಿಲ್ಲ ಎನ್ನುವುದಾದರೆ ಇವರು ಆತಂಕ ಪಡುವ ಅಗತ್ಯವಿಲ್ಲ ಎಂದು ಟೀಕಿಸಿದರು.
ದೇಶ, ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮತಾಂತರದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ನಾನು ಈ ವಿಚಾರವನ್ನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಒಳಿತು-ಕೆಡಕು ಗೊತ್ತಿರುವುದರಿಂದ ಯತ್ನಿಸಲ್ಲ, ಆದರೆ, ಕಾಳಸಂತೆಯಲ್ಲಿ ಕದ್ದ ಮಾಲು ಮಾರಲು ಹೊಟವರಂತೆ ಕೇರಿ, ಕಾಲೋನಿಗಳಿಗೆ ಹುಡುಕಿಕೊಂಡು ಹೋಗಿ ಉಡುಗೊರೆ ಕೊಡುವ ಮೂಲಕ ಮತಾಂತರಕ್ಕೆ ಆಮಿಷವನ್ನೊಡುತ್ತಿದ್ದಾರೆ ಎಂದು ಕಿಡಿಕಾರಿದರು.







