ಜಾತಿಗಣತಿ ವರದಿ ಬಿಡುಗಡೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋರಾಟ ನಡೆಯಬೇಕು: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು

ಮೈಸೂರು,ಸೆ.24: ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾವ ರಾಜಕಾರಣಿಗಳು ಮಾತನಾಡುತ್ತಿಲ್ಲ, ಹಾಗಾಗಿ ಜಾತಿಗಣತಿ ವರದಿ ಬಿಡುಗಡೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಹೋರಾಟ ನಡೆಯಬೇಕಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅಭಿಪ್ರಾಯಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಜಾತಿಗಣತಿ ವರದಿ ಬಿಡುಗಡೆಗಾಗಿ ಹೋರಾಟ ರೂಪಿಸಲು ಪೂರ್ವಭಾವಿಯಾಗಿ ಹಿಂದುಳಿದ ವರ್ಗಗಳ ಪ್ರಮುಖ ಮುಂಡರ ಸಭೆಯಲ್ಲಿ ಭಾಗವಹಿಸಿ ರೂಪು ರೇಷೆಯ ಸಾಧಕ ಭಾದಕಗಳ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯದಲ್ಲಿ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಮಹದೇವಪ್ಪ ಮತ್ತು ಶ್ರೀವಾಸ್ ಪ್ರಸಾದ್ ಸೇರಿದಂತೆ ಯಾವೊಬ್ಬ ರಾಜಕಾರಣಿಗಳು ಧನಿ ಎತ್ತುತ್ತಿಲ್ಲ, ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಬ್ಬರೆ ಮಾತನಾಡುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಜಾತಿಗಣತಿ ವರದಿ ಬಿಡುಗಡೆ ಹೋರಾಟ ರೂಪಿಸಬೇಕು ಎಂದು ಹೇಳಿದರು.
ಪ್ರಸ್ತುತ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ. ಅದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇನ್ನೆರಡು ವರ್ಷದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತು ಈ ಕೆಟ್ಟ ಸರ್ಕಾರವನ್ನು ಕಿತ್ತು ಹಾಕುವ ಕೆಲಸವನ್ನು ಮಾಡಬೇಕಿದೆ. ಅ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತ ಹೋರಾಟ ಮಾಡಬೇಕು ಎಂದು ಹೇಳಿದರು.
ನಾವು ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಒತ್ತಾಯ ಮಾಡುವ ಮೂಲಕ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಹೊರತು ದೇಶವನ್ನು ಕೇಳುತ್ತಿಲ್ಲ, ನಮ್ಮ ಪಾಲಿನ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆಯಬೇಕಿದೆ. ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಹರೀಶ್ ಗೌಡ, ಲಿಂಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.







