ಕೇರಳ: ಬಾಲಕಿಯ ಮೇಲೆ ಸತತ ಅತ್ಯಾಚಾರವೆಸಗಿದ ಆರೋಪಿ ಅರ್ಚಕನಿಗೆ ಜೀವಾವಧಿ

ತಿರುವನಂತಪುರ, ಸೆ.24: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಸತತವಾಗಿ ಅತ್ಯಾಚಾರವೆಸಗಿದ ಅರ್ಚಕನೊಬ್ಬನಿಗೆ ಕೇರಳ ಹೈಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ‘‘ಬಾಲಕಿಯನ್ನು ಆಕೆಯ ಒಡಹುಟ್ಟಿದವರ ಎದುರಲ್ಲಿ ಪದೇಪದೇ ಅತ್ಯಾಚಾರವೆಸಗಿದಂತಹ ಈ ಆರ್ಚಕನ ಪೂಜೆ, ಪ್ರಾರ್ಥನೆಗಳನ್ನು ಯಾವ ದೇವರು ತಾನೆ ಸ್ವೀಕರಿಸಿಯಾನು ಎಂದು ನ್ಯಾಯಾಲಯ ತೀರ್ಪು ನೀಡಿಕೆ ವೇಳೆ ಉದ್ಗರಿಸಿದೆ.
ಮಂಜೇರಿ ನಿವಾಸಿಯಾದ ಮಧು ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ತೀವ್ರವಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಅಲೆದಾಡುತ್ತಿದ್ದನ್ನು ಕಂಡ ಪೊಲೀಸರು ಆಕೆಯನ್ನು 2013ರ ಮಾರ್ಚ್ 1ರಂದು ರಕ್ಷಿಸಿದ್ದರು.
ಮಹಿಳೆಯೊಂದಿಗೆ ವಾಸವಾಗಿದ್ದ ಆರ್ಚಕನೊಬ್ಬ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ತನ್ನ ಮೇಲೆ ಅತ್ಯಾಚಾರವೆಸಗಿದ್ದನೆಂದು ವಿಚಾರಣೆಯ ವೇಳೆ ಆಕೆಯ ಹಿರಿಯ ಮಗಳು ತಿಳಿಸಿದ್ದಳು. ಸ್ಥಳೀಯ ದೇವಾಲಯವೊಂದರಲ್ಲಿ ಅರ್ಚಕನಾಗಿದ್ದ ಆರೋಪಿಯು ಸಾಮಾನ್ಯವಾಗಿ ಕುಡಿದು ಮನೆಗೆ ಬರುತ್ತಿದ್ದ ಮತ್ತು ಮಹಿಳೆ ಹಾಗೂ ಆಕೆಯ ಮಕ್ಕಳಿಗೆ ಥಳಿಸುತ್ತಿದ್ದ ಹಾಗೂ ಒಡಹುಟ್ಟಿದವರ ಎದುರಲ್ಲೇ ಹಿರಿಯ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದನೆಂಬುದನ್ನು ನ್ಯಾಯಾಲಯವು ವಿಚಾರಣೆಯಲ್ಲಿ ಮನಗಂಡಿತು.
‘‘ಈ ತಾಯಿಯ ಮಾನಸಿಕ ಸ್ಥಿತಿಯು ಸಮಾಜಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ಆಹಾರ ಮತ್ತು ವಸತಿ ಇಲ್ಲದೆ ಮೂವರು ಮಕ್ಕಳೊಂದಿಗೆ, ಪರಿತ್ಯಕ್ತಗೊಂಡಿದ್ದರಿಂದ ಆಕೆಗೆ ಮಾನಸಿಕ ಒತ್ತಡವುಂಟಾಗಿದೆಯೆಂಬುದು ಸ್ಪಷ್ಟ. ಈ ಕಾರಣದಿಂದಾಗಿಯೇ ಆಕೆಯ ಮಕ್ಕಳು ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯಾವುದೇ ತಾಯಿ ಕೂಡಾ ಮಾನಸಿಕವಾಗಿ ಸ್ವಸ್ಥಳಾಗಿರಲು ಸಾಧ್ಯವಿಲ ಎಂದು ನ್ಯಾಯಾಲಯ ತಿಳಿಸಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಕ್ಕಳನ್ನು ತೊರೆದಲ್ಲಿ, ಅಲೆದಾಡುತ್ತಿರುವ ಹದ್ದುಗಳು ಪರಿತ್ಯಕ್ತ ಮಹಿಳೆಯನ್ನು ಮಾತ್ರವಲ್ಲ ಆಕೆಯ ಅಸಹಾಯಕ ಮಕ್ಕಳನ್ನು ಕೂಡಾ ಬೇಟೆಯಾಡಲು ಕಾಯುತ್ತಿರುತ್ತವೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು.
ಬಾಲಕಿಯು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದನ್ನು ವೈದ್ಯಕೀಯ ಪುರಾವೆಗಳು ಸಾಬೀತುಪಡಿಸುತ್ತವೆ ಎಂದು ನ್ಯಾಯಾಲಯ ಪ್ರತಿಪಾದಿಸಿತು. ಈ ಪ್ರಕರಣದ ಸಾಕ್ಷಿಯಾಗಿರುವ ಸಂತ್ರಸ್ತೆಯ ಸೋದರನು ಹೇಳಿಕೆಗಳು ಕೂಡಾ ಬಾಲಕಿಯ ಹೇಳಿಕೆಗಳಿಗೆ ಪೂರಕವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಿಸಿತು.