ಸಂಸದೀಯ ಮೌಲ್ಯಗಳು ರಕ್ಷಿತ ಪರಿಧಿ ದಾಟಿದರೆ ಸರ್ವಾಧಿಕಾರಿಗಳ ಉಗಮ: ಬಸವರಾಜ ಹೊರಟ್ಟಿ

ಬೆಂಗಳೂರು, ಸೆ.24: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳು ಒಂದು ರಕ್ಷಿತ ಪರಿಧಿಯನ್ನು ದಾಟಿದರೆ, ಅಲ್ಲಿ ಸರ್ವಾಧಿಕಾರಿಗಳ ಉಗಮ ತಾನೇ ತಾನಾಗಿ ಸೃಷ್ಟಿಯಾಗಿ ಬಿಡುತ್ತದೆ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ವಿಧಾನಮಂಡಲದ ಉಭಯ ಸದನಗಳ ಸದಸ್ಯರ ಸಭೆಯನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ ಮಾಡುವ ಮುನ್ನ ಮಾತನಾಡಿದ ಅವರು, ಸಂವಿಧಾನದ ಮಾರ್ಗದರ್ಶನದಲ್ಲಿಯೆ ನಡೆಯಬೇಕಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೂರಕವಾಗಿ ಹಾಗೂ ಪ್ರಜಾಪರವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ, ಸಂಸದೀಯ ಮೌಲ್ಯಗಳನ್ನು ಪಾಲಿಸದೆ ಇದ್ದರೆ ಪ್ರಜಾಪ್ರಭುತ್ವಕ್ಕೆ ಸಂಚಕಾರ ಬಂದೊದಗುವ ಆತಂಕ ಸೃಷ್ಟಿಯಾಗುವ ಸಾಧ್ಯತೆಯಿದ್ದು ಸರ್ವಾಧಿಕಾರಿ ಆಡಳಿತಕ್ಕೆ ಪುಷ್ಟಿ ನೀಡುವ ಸಂದರ್ಭ ಬರುವ ಅಪಾಯವಿದೆ ಎಂದು ಅವರು ಹೇಳಿದರು.
ಶಾಸನ ಸಭೆಗಳಲ್ಲಿ ಚರ್ಚೆಗೆ ಅವಕಾಶ ನೀಡದೆ ಕೇವಲ ಗದ್ದಲ, ಗೊಂದಲ ಹಾಗೂ ರಾಜಕೀಯ ತಿಕ್ಕಾಟಗಳ ಮಧ್ಯೆಯೇ ವಿಧೇಯಕಗಳನ್ನು ಅನುಮೋದಿಸುವ ಪರಿಪಾಠ ನಡೆಯುತ್ತಿದ್ದು, ಗಲಾಟೆಗಳ ಮಧ್ಯೆಯೆ ಹಲವು ವಿಧೇಯಕಗಳನ್ನು ಅನುಮೋದಿಸುವ ಪರಿಪಾಠ ಮುಂದುವರೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎನ್ನುವುದನ್ನು ಬಹಳ ನೋವಿನಿಂದ ಹೇಳುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಇಂದು ನಮ್ಮೆಲ್ಲರ ‘ಅನುಕೂಲ ಸಿಂಧು ರಾಜಕಾರಣ’ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಸದನಗಳು ಆರೋಪ-ಪ್ರತ್ಯಾರೋಪಗಳ ಅಖಾಡಗಳಾಗಿವೆ. ‘ಭಿನ್ನತೆ’ಯೆಂಬುದು ‘ವಿರೋಧ’ ಎಂಬ ಅರ್ಥಕ್ಕೆ ಎಡೆಮಾಡಿಕೊಡುತ್ತಿರುವುದು ವಿಷಾದನೀಯ. ಜನರಿಂದ ಆರಿಸಿ ಬಂದ ನಾವು ಹೇಳಿದ ಕೂಡಲೆ ಎಲ್ಲ ಕಾರ್ಯಗಳು ನಡೆದುಬಿಡಬೇಕು ಎಂಬ ಧೋರಣೆ ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಲೆ ಇದೆ. ಒಂದು ವೇಳೆ ಅಧಿವೇಶನದಲ್ಲಿ ಮಂಡನೆಯಾಗದ ವಿಧೇಯಕಗಳನ್ನು ಸುಗ್ರಿವಾಜ್ಞೆ ಹೊರಡಿಸುವ ಮೂಲಕ ಅನುಷ್ಠಾನಗೊಳಿಸುತ್ತಿರುವ ಪರಿಪಾಠವಂತೂ ಅತ್ಯಂತ ನಿರಾಶಾದಾಯಕ ಸಂಪ್ರದಾಯಕ್ಕೆ ನಾಂದಿಯನ್ನೆ ಹಾಡಿಬಿಟ್ಟಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಯುವ ಪೀಳಿಗೆಗೆ ಆದ್ಯತೆ ನೀಡಿ ಮುತ್ಸದ್ದಿತನದ ಹಾಗೂ ಸಕ್ರಿಯ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕೋಣ. ವ್ಯಕ್ತಿನಿಷ್ಠೆಯನ್ನು ಪ್ರಧಾನವಾಗಿಸದೆ, ವಸ್ತುನಿಷ್ಠವಾಗಿ ಈ ಸಮಾಜವನ್ನು ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಭಾಪತಿ ಹೇಳಿದರು.







