ಸ್ಥಳೀಯ ಸಂಸ್ಥೆಗಳ ತೆರಿಗೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಲು ಶಿಫಾರಸ್ಸು

ಬೆಂಗಳೂರು, ಸೆ. 24: `ರಾಜ್ಯದ ಸ್ಥಳೀಯ ಸಂಸ್ಥೆಗಳ ತೆರಿಗೆಗಳಿಗೆ ಸಂಬಂಧಿಸಿದಂತೆ ಆಯಾ ಕಚೇರಿಗಳಲ್ಲಿ ಆಸ್ತಿ ತೆರಿಗೆ ವಸೂಲಾತಿ ರಿಜಿಸ್ಟರ್‍ಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು' ಎಂದು ವಿಧಾನ ಮಂಡಲ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಸಮಿತಿ ಅಧ್ಯಕ್ಷ ಜಿ. ಸೋಮಶೇಖರ್ ರೆಡ್ಡಿ ವರದಿಯನ್ನು ಮಂಡಿಸಿದರು. `ರಾಜ್ಯದ ನಗರ ಪಾಲಿಕೆ/ ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ದರಗಳನ್ನು ಕಾಲ-ಕಾಲಕ್ಕೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ತೆರಿಗೆಗಳನ್ನು ಪರಿಷ್ಕರಿಸಿಕೊಳ್ಳುವಂತೆ ಕಠಿಣ ಸೂಚನೆಯನ್ನು ಸಂಬಂಧಪಟ್ಟವರಿಗೆ ನೀಡಬೇಕು' ಎಂದು ನಿರ್ದೇಶಿಸಿದೆ.
`ರಾಜ್ಯದಲ್ಲಿರುವ ಎಲ್ಲ ಸ್ಥಳೀಯ ಸಂಸ್ಥೆಗಳು ಅಗತ್ಯ ಕಾನೂನುಗಳಿಗೆ ಅನುಗುಣವಾಗಿ ಏಕರೂಪದ ಬೈಲಾಗಳನ್ನು ರಚಿಸಿಕೊಳ್ಳುವ ದಿಸೆಯಲ್ಲಿ ಒಂದು ಸ್ಪಷ್ಟ ನಿಯಮವನ್ನು ರೂಪಿಸಬೇಕು. ಕಾಲಕಾಲಕ್ಕೆ ಬದಲಾದ ಕಾನೂನಿಗೆ ಅನುಸಾರವಾಗಿ ಬೈಲಾಗಳನ್ನು ಪರಿಷ್ಕರಿಸಿಕೊಳ್ಳಲು ನಿರ್ದೇಶನ ನೀಡಬೇಕು. ಸ್ಥಳೀಯ ಸಂಸ್ಥೆಗಳ ಬಗ್ಗೆ ಸರಕಾರ ಹೊರಡಿಸುವ ಅಧಿಸೂಚನೆಗಳು ಮತ್ತು ನಿಯಮಗಳ ಪ್ರತಿಗಳನ್ನು ವಿಧಾನ ಮಂಡಲ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಪರಿಶೀಲನೆಗಾಗಿ ಕಳುಹಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.







