ಗುಜರಾತ್‍ನ ಖ್ಯಾತ ವಜ್ರೋದ್ಯಮಿ ಕಚೇರಿಗಳ ಮೇಲೆ ಐಟಿ ದಾಳಿ

ಹೊಸದಿಲ್ಲಿ: ಸೆಪ್ಟೆಂಬರ್ 22 ಹಾಗೂ 23ರಂದು ಗುಜರಾತ್‍ನ ಖ್ಯಾತ ವಜ್ರೋದ್ಯಮಿ ಮತ್ತು ರಫ್ತುದಾರರೊಬ್ಬರ ಕಚೇರಿಗಳ ಮೇಲೆ ನಡೆಸಲಾದ ಐಟಿ ದಾಳಿಗಳಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ನಡೆದಿರುವುದು ಪತ್ತೆಯಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ. ಈ ವಜ್ರೋದ್ಯಮಿಯ ಒಡೆತನದಲ್ಲಿ ಗುಜರಾತ್‍ನ ಸೂರತ್, ನವ್ಸಾರಿ, ಮೊರ್ಬಿ ಮತ್ತು ವಂಕಾನೆರ್ ಹಾಗೂ ಮಹಾರಾಷ್ಟ್ರದ ಮುಂಬೈಯಲ್ಲಿ ಟೈಲ್ಸ್ ಉದ್ದಿಮೆಯೂ ಇದೆ ಎಂದು ತಿಳಿದು ಬಂದಿದೆ.
ದಾಳಿಗಳು ಇನ್ನೂ ಮುಂದುವರಿದಿವೆ ಎಂದು ತಿಳಿದು ಬಂದಿವೆ. ಸಂಸ್ಥೆಯು ಒಂದು ನಿರ್ದಿಷ್ಟ ಅವಧಿಯಲ್ಲಿ ಸುಮಾರು ರೂ. 518 ಕೋಟಿ ವೆಚ್ಚದ ಸಣ್ಣ ಪಾಲಿಷ್ಡ್ ವಜ್ರಗಳ ಖರೀದಿ ಮತ್ತು ಮಾರಾಟವನ್ನು ಅನಧಿಕೃತವಾಗಿ ಮಾಡಿದೆಯೆಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.
ಉದ್ಯಮಿಯು ರೂ. 95 ಕೋಟಿಗೂ ಅಧಿಕ ಮೌಲ್ಯದ ನಿರುಪಯೋಗಿ ವಜ್ರವನ್ನು ನಗದು ಪಡೆದು ಮಾರಾಟ ಮಾಡಿದೆ ಹಾಗೂ ಈ ಸಂಸ್ಥೆಯ ದಾಖಲೆಗಳ ಪ್ರಕಾರ ಕಳೆದ ಹಲವು ವರ್ಷಗಳಲ್ಲಿ ರೂ. 2,742 ಕೋಟಿ ಮೌಲ್ಯದ ವಹಿವಾಟು ನಡೆದಿದ್ದರೂ ಹೆಚ್ಚಿನ ಖರೀದಿಗಳು ನಗದು ತೆತ್ತು ನಡೆಸಲಾಗಿದೆ ಎಂದು ಹೇಳಲಾಗಿದೆ.
ದಾಳಿಯ ವೇಳೆ ರೂ 1.95 ಕೊಟಿ ಮೌಲ್ಯದ ಆಭರಣಗಳು ಹಾಗೂ ರೂ 10.98 ಕೋಟಿ ಮೌಲ್ಯದ 8900 ಕ್ಯಾರೆಟ್ ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ. ಸಂಸ್ಥೆಗೆ ಸೇರಿದ ಹಲವು ಲಾಕರುಗಳ ಮೇಲೆಯೂ ನಿಗಾ ಇಡಲಾಗಿದೆ.