ಬೋರ್ ವೆಲ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ನಾಲ್ವರು ಉಸಿರುಗಟ್ಟಿ ಮೃತ್ಯು

ಸಾಂದರ್ಭಿಕ ಚಿತ್ರ
ಗುರುಗ್ರಾಮ: ನುಹ್ನ ನೀಮ್ಕಾ ಗ್ರಾಮದಲ್ಲಿ ಶನಿವಾರ ಬೋರ್ವೆಲ್ ಅನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದಾಗ ವಿಷಕಾರಿ ಅನಿಲವನ್ನು ಸೇವಿಸಿ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು The Indian Express ವರದಿ ಮಾಡಿದೆ.
ಸಿಆರ್ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ವಿಚಾರಣೆಯನ್ನು ಆರಂಭಿಸಲಾಗಿದೆ. ಇದುವರೆಗೂ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೃತಪಟ್ಟವರನ್ನು ನೀಮ್ಕಾದ ಜಮ್ಶೆದ್ (45), ಶಾಹಿದ್ (21), ಜಾಕೀರ್ (17), ಯಾಹ್ಯಾ (17) ಎಂದು ಗುರುತಿಸಲಾಗಿದೆ.
ಸ್ವಚ್ಛಗೊಳಿಸುವ ಉದ್ದೇಶದಿಂದ ನಾಲ್ಕು ಜನರು 10 ಅಡಿ ಬೋರ್ವೆಲ್ನಲ್ಲಿ ಕೆಳಗಿಳಿದಿದ್ದರು. ಬೋರ್ ವೆಲ್ ಅನ್ನು ಮೃತರ [ಶಾಹಿದ್] ಕುಟುಂಬಕ್ಕೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ ಸುಮಾರು 4 ಅಡಿ ನೀರು ಇತ್ತು. ಅವರು ಬೋರ್ವೆಲ್ ಒಳಗೆ ವಿಷಕಾರಿ ಅನಿಲವನ್ನು ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಬಿಚೋಡ್ ಪೊಲೀಸ್ ಠಾಣೆಯ ಎಸ್ಎಚ್ಒ ಅಜಯ್ ವೀರ್ ಸಿಂಗ್ ಭದ್ರಾನಾ ಹೇಳಿದ್ದಾರೆ.
ಪೊಲೀಸರು ಹಾಗೂ ಗ್ರಾಮಸ್ಥರ ಪ್ರಕಾರ, ಈ ಘಟನೆ ಬೆಳಿಗ್ಗೆ 11.30 ರ ಸುಮಾರಿಗೆ ನಡೆದಿದೆ.