ಇಂದು ಪಂಜಾಬ್ ಸಚಿವ ಸಂಪುಟ ವಿಸ್ತರಣೆ

ಚರಣಜಿತ್ ಸಿಂಗ್ ಚನ್ನಿ
ಅಮೃತಸರ: ಹೊಸದಾಗಿ ನೇಮಕಗೊಂಡ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಏಳು ಹೊಸ ಮುಖಗಳನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ಅಂತೆಯೇ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಕ್ಯಾಪ್ಟನ್ ನಿಷ್ಠ ಐದು ಮಂದಿ ಸಚಿವರಿಗೆ ಕೊಕ್ ನೀಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮೂರು ಸುತ್ತಿನ ಮಾತುಕತೆಯ ಬಳಿಕ ಪಂಜಾಬ್ ಸಂಪುಟವನ್ನು ಅಂತಿಮಪಡಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ನಡೆಯಲು ಐದು ತಿಂಗಳಿಗೂ ಕಡಿಮೆ ಅವಧಿ ಇದ್ದು, ಕಳೆದ ಶನಿವಾರ ರಾಜ್ಯದ ಕಾಂಗ್ರೆಸ್ ಸದಸ್ಯರ ಸಭೆಯನ್ನು ಪಕ್ಷ ಕರೆದ ಬಳಿಕ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಮರುದಿನ ರಾಜ್ಯದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದ ಚರಣಜಿತ್ ಸಿಂಗ್, ಶನಿವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಸಂಪುಟದ 15 ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಂಪುಟ ವಿಸ್ತರಣೆಗೆ ಸಮಯ ಕೋರಿದ್ದರು. ರವಿವಾರ ಸಂಜೆ 4.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.
ಸಂಪುಟ ರಚನೆ ಬಗ್ಗೆ ದೆಹಲಿಯಲ್ಲಿ ಮುಖಂಡರ ಜತೆ ಚರ್ಚಿಸಿ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಚನ್ನಿ ರಾಜ್ಯಪಾಲರನ್ನು ಭೇಟಿಯಾಗಿದ್ದರು.