ಕಾಶ್ಮೀರ: ಬಿಜೆಪಿ ನಾಯಕನ ಹತ್ಯೆಗೈದಿದ್ದ ಉಗ್ರ ಭದ್ರತಾ ಪಡೆಗಳ ಗುಂಡಿಗೆ ಬಲಿ

ಸಾಂದರ್ಭಿಕ ಚಿತ್ರ
ಶ್ರೀನಗರ,ಸೆ.26: ಬಿಜೆಪಿ ನಾಯಕ ವಸೀಂ ಬಾರಿ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಹತ್ಯೆಗೈದಿದ್ದ ಭಯೋತ್ಪಾದಕ ರವಿವಾರ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ ಕೊಲ್ಲಲ್ಲಟ್ಟಿರುವ ಇಬ್ಬರು ಉಗ್ರರಲ್ಲಿ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡಿಪೋರಾದ ವಟ್ರಿನಾ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಪಡೆದಿದ್ದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡುಗಳನ್ನು ಹಾರಿಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿಯನ್ನು ನಡೆಸಿದ್ದು,ಇಬ್ಬರು ಅಪರಿಚಿತ ಉಗ್ರರು ಕೊಲ್ಲಲ್ಪಟ್ಟಿದ್ದಾರೆ. ಅವರ ಪೈಕಿ ಓರ್ವ ಕಳೆದ ವರ್ಷದ ಜುಲೈನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಾರಿ,ಅವರ ತಂದೆ ಮತ್ತು ಸೋದರನನ್ನು ಹತ್ಯೆಗೈದಿದ್ದ ಎಂದು ಪೊಲೀಸರು ಟ್ವೀಟಿಸಿದ್ದಾರೆ.
ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆಯು ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.