ಅಲ್ಬಾಡಿ-ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಪ್ರೌಢಶಾಲೆಯ 2 ವಿದ್ಯಾರ್ಥಿನಿಯರಿಗೆ ಉಪರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

ಉಡುಪಿ, ಸೆ.26: ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ರಾಷ್ಟ್ರಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ‘ಶಾಲಾ ಮಕ್ಕಳ ಸಿಎಸ್‌ಐಆರ್ ಇನ್ನೋವೇಷನ್ ಅವಾರ್ಡ್ 2021’ರಲ್ಲಿ ನಾಲ್ಕನೇ ಪ್ರಶಸ್ತಿಯನ್ನು ಗೆದ್ದ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಮತ್ತು ರಕ್ಷಿತಾ ನಾಯ್ಕಿ ಇವರಿಗೆ ಉಪರಾಷ್ಟ್ರಪತಿ ಎಂ .ವೆಂಕಯ್ಯ ನಾಯ್ಡು ಅವರು ಇಂದು ಆನ್‌ಲೈನ್‌ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಶಾಲೆಯು ಸಿಎಸ್‌ಐಆರ್ ನೂತನ ವಿಜ್ಞಾನ ಆವಿಷ್ಕಾರ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಸರಕಾರಿ ಶಾಲೆಯಾಗಿದೆ.
ಉಡುಪಿ ಜಿಲ್ಲೆಯ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದ ಕುಡುಬಿ ಜನಾಂಗದ ಇಬ್ಬರು ಬಾಲಕಿಯರು ಮಾಡಿರುವ ನೂತನ ವಿಜ್ಞಾನ ಆವಿಷ್ಕಾರ ‘ಗ್ಯಾಸ್ ಉಳಿತಾಯ ಕಿಟ್ (ಜಿಎಸ್‌ಕೆ)’ಗೆ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಒಟ್ಟು 14 ಶಾಲೆಗಳಲ್ಲಿ ನಾಲ್ಕನೇ ಪ್ರಶಸ್ತಿ ದೊರೆಕಿದೆ.
ಕರ್ನಾಟಕದಿಂದ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಶಾಲೆಯೂ ಇದಾಗಿದೆ. ಹೊಸದಿಲ್ಲಿಯಲ್ಲಿ ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹಾಗೂ ಸಿಎಸ್ಐ.ಆರ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







