ಅತಂತ್ರರಾಗಿರುವ ಭಾರತೀಯರು ಮರಳಲು ಚೀನಾ ಅನುಮತಿ ನೀಡದಿರುವುದು ಅವೈಜ್ಞಾನಿಕ: ಭಾರತ
ಬೀಜಿಂಗ್.ಸೆ.26: ಕೋವಿಡ್ ಸಾಂಕ್ರಾಮಿಕದಿಂದಾಗಿ ಅತಂತ್ರರಾಗಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು,ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಮರಳಲು ಅನುಮತಿಗೆ ಚೀನಾ ಹಿಂದೇಟು ಹೊಡೆಯುತ್ತಿರುವುದರ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿರುವ ಭಾರತವು,ಇದು ಸಂಪೂರ್ಣವಾಗಿ ಮಾನವೀಯ ಸಮಸ್ಯೆಗೆ ಅವೈಜ್ಞಾನಿಕ ನಿಲುವು ಆಗಿದೆ ಎಂದು ಬಣ್ಣಿಸಿದೆ.
ಕೋವಿಡ್ ಸಾಂಕ್ರಾಮಿಕವನ್ನು ಉಲ್ಲೇಖಿಸಿ ಚೀನಾ ವೀಸಾ ಪ್ರಕ್ರಿಯೆ ಮತ್ತು ಭಾರತದಿಂದ ವಿಮಾನಗಳ ಆಗಮನವನ್ನು ಅಮಾನತುಗೊಳಿಸಿರುವುದರಿಂದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿರುವ 23,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು,ನೂರಾರು ಉದ್ಯಮಿಗಳು ಮತ್ತು ಉದ್ಯೋಗಿಗಳು ಹಾಗೂ ಅವರ ಕುಟುಂಬಗಳು ಕಳೆದೊಂದು ವರ್ಷದಿಂದ ಅಲ್ಲಿಗೆ ಮರಳಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ. ಕೋವಿಡ್ ಮೊದಲ ಬಾರಿಗೆ 2019ರಲ್ಲಿ ಚೀನಾದಲ್ಲಿಯೇ ಕಾಣಿಸಿಕೊಂಡಿತ್ತು.
ಸೆ.23ರಂದು ಚೀನಾ-ಭಾರತ ಸಂಬಂಧಗಳ ಕುರಿತು ನಡೆದ ನಾಲ್ಕನೇ ಸುತ್ತಿನ ಉನ್ನತ ಮಟ್ಟದ ವರ್ಚುವಲ್ ಮಾತುಕತೆಗಳಲ್ಲಿ ಅತಂತ್ರರಾಗಿರುವ ಭಾರತೀಯರ ಬವಣೆಯನ್ನು ಪ್ರಸ್ತಾಪಿಸಿದ ಭಾರತದ ರಾಯಭಾರಿ ವಿಕ್ರಮ ಮಿಸ್ರಿ ಅವರು, ವಿದ್ಯಾರ್ಥಿಗಳು,ಉದ್ಯಮಿಗಳು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಭಾರತದಿಂದ ಚೀನಾಕ್ಕೆ ಪ್ರಯಾಣಿಸಲು ಅನುಕೂಲ ಕಲ್ಪಿಸುವಂತಹ ದ್ವಿಪಕ್ಷೀಯ ರಾಜತಾಂತ್ರಿಕ ನಿಲುವುಗಳಿಗೆ ಎಳ್ಳಷ್ಟೂ ಸಂಬಂಧಿಸಿರದ ಅತ್ಯಂತ ಕಡಿಮೆ ಸಂಕೀರ್ಣ ವಿಷಯಗಳು ಹೆಚ್ಚು ಸಮತೋಲಿತ ಮತ್ತು ಸೂಕ್ಷ್ಮ ದೃಷ್ಟಿಕೋನಕ್ಕಾಗಿ ಕಾಯುತ್ತಿವೆ ಎಂದು ಹೇಳಿದ್ದಾರೆ.
ಭಾರತವೂ ಪ್ರಚಲಿತ ಸ್ಥಿತಿಯಿಂದ ನಮ್ಮ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಪ್ರತ್ಯೇಕವಾಗಿರಿಸಲು ಪ್ರಯತ್ನಿಸಿದೆ. ಉದಾಹರಣೆಗೆ ಚೀನಿ ಉದ್ಯಮಿಗಳು ಭಾರತಕ್ಕೆ ಭೇಟಿ ನೀಡಲು ವೀಸಾ ವಿತರಣೆಯನ್ನು ಅದು ಮುಂದುವರಿಸಿದೆ ಎಂದೂ ಮಿಸ್ರಿ ಹೇಳಿದ್ದಾರೆ.







