ರೈತ ಚಳವಳಿಗೆ ಶಕ್ತಿ ತುಂಬಬೇಕಾಗಿದೆ: ಅನ್ವರ್ ಸಾದಾತ್
ಭಾರತ್ ಬಂದ್ ಬೆಂಬಲಿಸಿ ಬಿ.ಸಿ.ರೋಡಿನಲ್ಲಿ ಎಸ್.ಡಿ.ಪಿ.ಐ. ಪ್ರತಿಭಟನೆ

ಬಂಟ್ವಾಳ, ಸೆ.27: ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳ ಕೈ ಒಪ್ಪಿಸಲು ಸಹಕಾರಿಯಾಗುವಂತೆ ರೂಪಿಸಿರುವ ಕೇಂದ್ರ ಸರಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳು ದೇಶದ ರೈತರ ಮರಣ ಶಾಸನವಾಗಿದ್ದು ಇದರ ವಿರುದ್ಧದ ರೈತರ ಚಳವಳಿಗೆ ಪ್ರತಿಯೊಬ್ಬರು ಇನ್ನಷ್ಟು ಶಕ್ತಿ ತುಂಬಬೇಕಾಗಿದೆ ಎಂದು ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜೆತ್ತೂರ್ ಹೇಳಿದರು.
ಕೇಂದ್ರ ಸರಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸೋಮವಾರ ಬಿ.ಸಿ.ರೋಡ್ ಕೈಕಂಬದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈಲು, ವಿಮಾನ, ಬಂದರು, ಶಿಕ್ಷಣ, ಮೊದಲಾದ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ದೇಶದ ಅಮೂಲ್ಯ ಸಂಪತ್ತನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಕೃಷಿ ಕ್ಷೇತ್ರವನ್ನೂ ಬಂಡವಾಳ ಶಾಹಿಗಳಿಗೆ ಧಾರೆ ಎರೆಯಲು ಸಹಕಾರಿಯಾಗುವ ಕಾಯ್ದೆಯನ್ನು ಜಾರಿ ಮಾಡಿದೆ. ಇದರ ವಿರುದ್ಧ ಜನಾಂದೋಲನ ಅಗತ್ಯವಾಗಿದೆ ಎಂದರು.
ಎಸ್.ಡಿ.ಪಿ.ಐ. ಪಕ್ಷದ ಪ್ರಮುಖರಾದ ಅಕ್ಬರ್ ಅಲಿ ಮಾತನಾಡಿ, ಈ ಹಿಂದೆ ರೈತರ ಚಳವಳಿಗೆ ಪಾರ್ಲಿಮೆಂಟ್ ಅಲುಗಾಡುತ್ತಿತ್ತು. ದಲಿತರ ತಮಟೆಯ ಶಬ್ದಕ್ಕೆ ವಿಧಾನ ಸೌಧ ನಡುಗುತ್ತಿತ್ತು. ಪ್ರತಿಭಟನೆ, ಚಳವಳಿ, ಜನಾಂದೋಲನಕ್ಕೆ ಸರಕಾರಗಳು ಗೌರವ ನೀಡುತ್ತಿದ್ದವು. ಆದರೆ ಇಂದು ರೈತರು, ದಲಿತರ ನಡುವೆ ಸೇರಿಕೊಂಡಿರುವ ಸಂಘ ಪರಿವಾರ ಅವರ ಚಳವಳಿಯ ದಿಕ್ಕನ್ನೇ ಬದಲಿಸಿದೆ. ಸರಕಾರದ ವಿರುದ್ಧ ನಡೆಯುವ ಪ್ರತಿಭಟನೆಯನ್ನು ದೇಶದ ವಿರುದ್ಧ ನಡೆಯುವ ಪ್ರತಿಭಟನೆ ಎಂದು ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದರು.
ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಬಿಂಬಿಸುವ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶಾಹುಲ್ ಹಮೀದ್ ಎಸ್.ಎಚ್., ಯೂಸುಫ್ ಅಲಡ್ಕ, ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಸಲೀಂ ಆಲಂಪಾಡಿ, ಖಲಂದರ್ ಪರ್ತಿಪಾಡಿ, ಇಕ್ಬಾಲ್ ಪರ್ಲ್ಯ, ಇಕ್ಬಾಲ್ ಮೈನ್ಸ್, ಮಜೀದ್ ಆಲಡ್ಕ, ಝಕರಿಯಾ ಗೋಳ್ತಮಜಲು, ಸತ್ತಾರ್ ಕಲ್ಲಡ್ಕ, ಕೆ.ಎಂ.ಅಬ್ದುಲ್ ರಹ್ಮಾನ್ ಉದ್ದೋಟು ಆಲಾಡಿ ಮೊದಲಾದವರು ಉಪಸ್ಥಿತರಿದ್ದರು. ಮಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.








.jpeg)


