ರೈತ ಸಮುದಾಯವನ್ನು ಸರ್ವನಾಶ ಮಾಡುವ ಕಾಯ್ದೆಗಳು: ಪ್ರಕಾಶ್ಚಂದ್ರ ಶೆಟ್ಟಿ

ಬೈಂದೂರು, ಸೆ.27: ರೈತರಿಗೆ ಮಾರಕ ವಾಗುವಂತಹ ಕಾಯ್ದೆಗಳನ್ನು ಜಾರಿ ಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ರೈತ ಸಮುದಾಯ ವನ್ನು ಸರ್ವನಾಶ ಮಾಡುವ ಈ ಕಾಯ್ದೆಗಳು ಅವೈಜ್ಞಾನಿಕವಾಗಿವೆ. ಭೂಸುಧಾರಣಾ ಕಾಯ್ದೆ ಜಾರಿಯಾದರೆ ಕೃಷಿ ಕ್ಷೇತ್ರ ಅಧಃಪತನದತ್ತ ಸಾಗುತ್ತದೆ ಎಂದು ರೈತ ಪರ ಹೋರಾಟಗಾರ ಪ್ರಕಾಶ್ಚಂದ್ರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ್ ಬಂದ್ ಹಿನ್ನಲೆಯಲ್ಲಿ ಬೈಂದೂರು ಅಂಡರ್‌ಪಾಸ್ ಬಳಿ ಸೋಮ ವಾರ ಕಾಂಗ್ರೆಸ್ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಎಪಿಎಂಸಿ, ವಿದ್ಯುತ್ ಕಾಯ್ದೆ ತಿದ್ದುಪಡಿಗಳು ಕೂಡ ರೈತರ ಹಕ್ಕನ್ನು ಕಸಿದು ಕೊಳ್ಳುವ ಕಾಯ್ದೆಗಳಾಗಿವೆ. ಇವುಗಳ ವಿರುದ್ಧ ಹೋರಾಟವನ್ನು ಪ್ರಾರಂಭಿಸಿ ದ್ದೇವೆ. ರಾಜ್ಯದಲ್ಲೂ ಹೋರಾಟವನ್ನು ತೀವ್ರಗೊಳಿಸುತ್ತೇವೆ. ರೈತರಿಂದ ಅಧಿಕಾರಕ್ಕೆ ಬಂದ ಸರಕಾರಗಳು ರೈತರನ್ನು ನಾಶ ಮಾಡುವಂತಹ ಕಾಯ್ದೆಗಳನ್ನು ಜನರಿಗೆ ತರುತ್ತವೆ. ಕಾರ್ಫೋರೇಟ್ ವಲಯಗಳನ್ನು ಪೋಷಿಸಲು ಮುಂದಾ ಗುತ್ತವೆ. ಇವುಗಳಿಗೆ ಯಾವುದೇ ಕಾರಣಕ್ಕೂ ನಾವು ಆಸ್ಪದ ಕೊಡುವುದಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಸುರೇಶ್ ಕಲ್ಲಾಗಾರ್, ವೆಂಕಟೇಶ್ ಕೋಣಿ, ಕಾಂಗ್ರೆಸ್ ಮುಖಂಡರಾದ ಮದನ್ ಕುಮಾರ್, ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಮಾಜಿ ಸದಸ್ಯ ರಾದ ಜಗದೀಶ್ ದೇವಾಡಿಗ, ಮಂಜುನಾಥ ಪೂಜಾರಿ, ಕಾಂಗ್ರೆಸ್ ಯುವ ಸಂಘಟನೆಯ ಮುಖಂಡರಾದ ಶೇಖರ ಪೂಜಾರಿ, ಸ್ಥಳೀಯರಾದ ಸಂದೇಶ್ ಭಟ್, ಅಣ್ಣಪ್ಪಪೂಜಾರಿ ಮೊದಲಾದವರು ಉಪಸ್ಥಿತರಿದ್ದರು







