ತಣ್ಣೀರುಬಾವಿ: ತೈಲ ಲೋಡಿಂಗ್ ಮಾಡಲು ಒತ್ತಾಯಿಸಿ ಟ್ಯಾಂಕರ್ ಮಾಲಕರ ಪ್ರತಿಭಟನೆ

ಮಂಗಳೂರು, ಸೆ.27: ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲಿಲೋಡಿಂಗ್ ಮಾಡಲು ಅವಕಾಶ ನೀಡಿ ಸಮಾನ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ದ.ಕ. ಮತ್ತು ಉಡುಪಿ ಟ್ಯಾಂಕರ್ ಮಾಲಕರ ಸಂಘದ ಸದಸ್ಯರು, ಚಾಲಕರು ತಣ್ಣೀರುಬಾವಿಯಲ್ಲಿರುವ ತೈಲ ಪೂರೈಸುವ ಖಾಸಗಿ ಕಂಪನಿಯ ಮುಂದೆ ಟ್ಯಾಂಕರ್ ನಿಲ್ಲಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಸಂಘದ ಮುಖಂಡ ಪ್ರವೀಣ್ ಕುತ್ತಾರ್ ಮಾತನಾಡಿ ಕಳೆದ ಐದು ವರ್ಷಗಳಿಂದ ಕಂಪನಿಯ ಅಭಿವೃದ್ಧಿಗೆ ನಾವು ಕೈ ಜೋಡಿಸಿದ್ದೇವೆ. ಈ ಹಿಂದೆ ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲಿ ಲೋಡು ನೀಡುತ್ತಿದ್ದರು. ಇದೀಗ ಹೊಸ ಅ್ಯಪ್ ಬಳಕೆಗೆ ತಂದು ಡೀಲರ್‌ಗಳು ತಮಗೆ ಬೇಕಾದ ಟ್ಯಾಂಕರ್‌ಗಳ ನಂಬರ್ ಅಪ್‌ಲೋಡ್ ಮಾಡಿ ಆ ಟಾ್ಯಂಕರ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಷ್ಟದಲ್ಲಿದ್ದಾಗ ಕಂಪನಿಯನ್ನು ನಾವು ಕೈ ಬಿಟ್ಟಿಲ್ಲ. ಮೂರು ಟ್ರಾನ್ಸ್‌ಪೋರ್ಟ್ ಕಂಪನಿಯ ಮಾಲಕರು ಸೆ.7ರಂದು ನ್ಯಾಯಾಲಯದಿಂದ ತಡೆಯಾಜ್ಜೆ ತಂದು ಸಾಲಿನಲ್ಲಿ ನಿಲ್ಲದೆ ಇಷ್ಟ ಬಂದ ಹಾಗೆ ವರ್ತಿಸುತ್ತಿದ್ದಾರೆ. ಸೆ.17ರಂದು ತಡೆಯನ್ನು ತೆರವುಗೊಳಿಸಿ ಆದ್ಯತೆಯ ಮೇಲೆ ನೀಡುವ ಬಗ್ಗೆ ನ್ಯಾಯಾಲಯ ಸೂಚಿಸಿದೆ. ಆದರೂ ನ್ಯಾಯಾಲಯದ ಸೂಚನೆಯನ್ನು ಕಂಪೆನಿಯು ಪಾಲಿಸುತ್ತಿಲ್ಲ. ತೈಲ ಪೂರೈಕೆ ಕಂಪನಿ ಅಧಿಕಾರಿಗಳು ಈ ಹಿಂದಿನಂತೆಯೇ ಎಲ್ಲರಿಗೂ ಲೋಡು ನೀಡಬೇಕು ಎಂದು ಪ್ರವೀಣ್ ಕುತ್ತಾರ್ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಸುಜಿತ್ ಆಳ್ವಮ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಸತೀಶ್ ಮುಂಚೂರು,ಜಯರಾಜ್, ಸುನೀಲ್ ಶೆಟ್ಟಿ, ಶೋಧನ್ ಮತ್ತಿತರರು ಉಪಸ್ಥಿತರಿದ್ದರು.







