ಶೇ 5ರಷ್ಟಾದರೂ ಪಾವತಿಸಲು ಸಿದ್ಧರಿದ್ದೀರಾ?: ಕೇಜ್ರಿವಾಲ್ ರ ʼಬಾಡಿಗೆ ಪಾವತಿʼ ಭರವಸೆ ಕುರಿತು ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಬಾಡಿಗೆ ಪಾವತಿಸಲು ಸಾಧ್ಯವಾಗದವರ ಬಾಡಿಗೆಯನ್ನು ಸರಕಾರ ಪಾವತಿಸುವುದಾಗಿ ಕಳೆದ ವರ್ಷದ ಲಾಕ್‍ಡೌನ್ ವೇಳೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದ ಹೇಳಿಕೆ ಸಂಬಂಧ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಏಕಸದಸ್ಯ ಪೀಠ ಜುಲೈ ತಿಂಗಳಲ್ಲಿ ನೀಡಿದ ಆದೇಶಕ್ಕೆ ದಿಲ್ಲಿ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ಆದರೆ ಬಾಡಿಗೆ ಹಣ ನೀಡುವ ಯಾವುದೇ ನಿಜವಾದ ಉದ್ದೇಶವಿಲ್ಲದೆ ಸರಕಾರ ನೀಡಿದ ಇಂತಹ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಅವರ ನೇತೃತ್ವದ ಪೀಠ ಖಂಡಿಸಿದೆ. "ನೀವು ಶೇ 5ರಷ್ಟಾದರೂ ಪಾವತಿಸಲು ಸಿದ್ಧರಿದ್ದೀರಾ? ಒಂದು ನೀತಿ ರೂಪಿಸಿ, 1,000 ಜನರು ನಿಮ್ಮ ಬಳಿ ಬರುತ್ತಾರೆ" ಎಂದು ವಿಭಾಗೀಯ ಪೀಠ ಇಂದು ಹೇಳಿದೆ.
ಮುಖ್ಯಮಂತ್ರಿಯೊಬ್ಬರು ನೀಡಿದ ಹೇಳಿಕೆ ಜಾರಿಗೊಳಿಸಬೇಕಾದ ಭರವಸೆಯಾಗಿದೆ ಎಂದು ಜುಲೈಯಲ್ಲಿ ಜಸ್ಟಿಸ್ ಪ್ರತಿಭಾ ಸಿಂಗ್ ಅವರ ಪೀಠ ತನ್ನ ತೀರ್ಪಿನಲ್ಲಿ ಹೇಳಿತ್ತು. ಆದರೆ ಇದನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಸಲ್ಲಿಸಿದ ಅಪೀಲಿಗೆ ಇಂದು ತಡೆಯಾಜ್ಞೆ ದೊರಕಿದೆ.
ನವೆಂಬರ್ 2020ರಲ್ಲಿ ಐದು ಮಂದಿ ದಿನಗೂಲಿ ಕಾರ್ಮಿಕರು ಹಾಗೂ ಓರ್ವ ಕಟ್ಟಡ ಮಾಲಿಕ ಸೀಎಂ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ ನಂತರ ಜುಲೈ ತಿಂಗಳಲ್ಲಿ ಆದೇಶ ಹೊರಬಿದ್ದಿತ್ತು. ಕಳೆದ ವರ್ಷದ ಮಾರ್ಚ್ 29ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಕೇಜ್ರಿವಾಲ್, ಬಾಡಿಗೆ ಪಾವತಿಸುವಂತೆ ಒತ್ತಡ ಹೇರದಂತೆ ಕಟ್ಟಡ ಮಾಲೀಕರಿಗೆ ವಿನಂತಿಸಿದ್ದರಲ್ಲದೆ ಬಡತನದಿಂದ ಯಾರಿಗಾದರೂ ಬಾಡಿಗೆ ಪಾವತಿಸಲು ಸಾಧ್ಯವಾಗದೇ ಇದ್ದಲ್ಲಿ ಸರಕಾರ ಅವರ ಪರವಾಗಿ ಪಾವತಿಸುವುದು ಎಂದು ಹೇಳಿದ್ದರು.