ಖಾಸಗಿ ಬಸ್ ಪ್ರಯಾಣ ದರ ಇಳಿಸುವಂತೆ ಆಗ್ರಹಿಸಿ ಡಿಸಿಗೆ ಮನವಿ

ಉಡುಪಿ, ಸೆ.27: ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಇಳಿಸುವಂತೆ ಮತ್ತು ಬಸ್ ಚಾಲಕರು ಹಾಗೂ ನಿರ್ವಹಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಸೆಮವಾರ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಖಾಸಗಿ ಬಸ್‌ಗಳ ದರ ಶೇ.75ರಷ್ಟು ಏರಿಕೆಯಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಯಾವುದೇ ರಿಯಾಯಿತಿ ನೀಡುತ್ತಿಲ್ಲ. ಕೂಡಲೇ ಬಸ್ ಪ್ರಯಾಣ ದರ ಇಳಿಸಲು ಕ್ರಮ ತೆಗೆದುಕೊಳ್ಳಬೇಕು. ಎರಡು ಲಾಕ್‌ಡೌನ್ ಅವಧಿಯಲ್ಲಿ ಬಸ್ ಮಾಲಕರು ಪಾವತಿಸಬೇಕಾದ ತೆರಿಗೆ ಮತ್ತು ಲಾಕ್‌ಡೌನ್ ಅವಧಿಯ ಬಸ್ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಬಸ್ ಚಾಲಕರು ಮತ್ತು ನಿರ್ವಹಕರಿಗೆ ತಲಾ 10ಸಾವಿರ ರೂ. ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮಾಜಿ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮಾದ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಮಾಜಿ ನಗರಸಭಾ ಸದಸ್ಯ ನಾರಾಯಣ್ ಕುಂದರ್, ಗ್ರಾಪಂ ಸದಸ್ಯರಾದ ಲಕ್ಷ್ಮಣ ಪೂಜಾರಿ, ಶಬರೀಶ್ ಸುವರ್ಣ, ಗಣೇಶ್ ದೇವಾಡಿಗ, ಮಿಥುನ್ ಅಮೀನ್, ಸತೀಶ್ ಕುಮಾರ್ ಮಂಚಿ, ಸಾಯಿರಾಜ್ ಕಿದಿಯೂರು, ಸಂಜಯ್ ಆಚಾರ್ಯ, ಸಚಿನ್ ಶೆಟ್ಟಿ, ಇಮ್ತಿಯಾಝ್ ಮೊದಲಾದವರು ಉಪಸ್ಥಿತರಿದ್ದರು.







