ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು: ರಘುಪತಿ ಭಟ್

ಉಡುಪಿ, ಸೆ.27: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಇವುಗಳನ್ನು ಬಳಿಸಿಕೊಂಡು, ಪ್ರವಾಸೋದ್ಯಮದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಜಿಲ್ಲೆಯನ್ನು ಪ್ರವಾಸಿಗರ ಆಕರ್ಷಣೀಯ ತಾಣವನ್ನಾಗಿ ಮಾಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ದಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಇವುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್‌ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರವೂ ಇಂದು ನಷ್ಠ ಅನುಭವಿಸಿದೆ. ಆದರೆ ಪ್ರಸ್ತುತ ಪ್ರವಾಸಿಗರು ಪ್ರವಾಸಿ ಕ್ಷೇತ್ರಗಳಿಗೆ ಆಗಮಿಸ ತೊಡಗಿದ್ದು, ಉಡುಪಿಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ ಮತ್ತು ಹೆಲ್ತ್ ಟೂರಿಸಂಗೆ ವಿಫುಲವಾದ ಅವಕಾಶಗಳಿವೆ. ಜಿಲ್ಲೆಯಲ್ಲಿನ ಹೊಸ ಪ್ರವಾಸಿ ತಾಣ ಗಳನ್ನು ಅಭಿವೃದ್ದಿಪಡಿಸಲು ಇದು ಸಕಾಲ. ಇಂತಹ ತಾಣಗಳನ್ನು ಮುನ್ನೆಲೆಗೆ ತರಬೇಕಿದೆ ಎಂದರು.
ಜಿಲ್ಲೆಯಲ್ಲಿ ಪ್ರವಾಸೋಧ್ಯಮವನ್ನು ಅಭಿವೃದ್ದಿಪಡಿಸಲು ಟೂರಿಸಂ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಈ ಕಾರ್ಯಪಡೆ ನಿಯಮಿತವಾಗಿ ಸಭೆಗಳನ್ನು ನಡೆಸಿ, ಸಭೆಯ ನಿರ್ಣಯಗಳ ಕುರಿತು ಸರಕಾರಕ್ಕೆ ವರದಿಯನ್ನು ಕಳುಹಿಸ ಬೇಕು ಎಂದು ಶಾಸಕರು ಹೇಳಿದರು.
ಇದೇ ಸಂದರ್ಭದಲ್ಲಿ ಕಾಪು ಬೀಚ್‌ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಸಿ ಪ್ರವಾಸಿಗರ ಜೀವ ರಕ್ಷಿಸಿದ ರಾಜ್ಯ ಪ್ರಶಸ್ತಿ ವಿಜೇತ ಗೃಹರಕ್ಷಕ ದಳದ ಸಿಬ್ಬಂದಿ ಲಕ್ಷ್ಮೀನಾರಾಯಣ ರಾವ್ ಅರನ್ನು ಶಾಸಕರು ಅಭಿನಂದಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ವೈಧ್ಯತೆಯಿಂದ ಕೂಡಿರುವ ಹಲವು ತಾಣಗಳಿವೆ. ಇವುಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ದಿಗೊಳಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಏರ್ಪಡಿ ಸಬೇಕು. ಹೋಮ್‌ಸ್ಟೇ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದ್ದು, ಇದಕ್ಕೆ ಬೇಕಾದ ಎನ್‌ಓಸಿಯ ಷರತ್ತುಗಳನ್ನು ಸರಳೀಕರಣಗೊಳಿಸಲಾಗುವುದು. ಆತಿಥ್ಯ ವ್ಯವಸ್ಥೆಗೆ ಸಂಬಂದಿಸಿದಂತೆ ಉಡುಪಿ ಪ್ರಸಿದ್ದಿ ಹೊಂದಿದ್ದು, ಈ ಕ್ಷೇತ್ರದ ಪರಿಣಿತರ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಕೇರಳ ಮತ್ತು ಗೋವಾ ಮಧ್ಯೆ ಇರುವ ಕರ್ನಾಟಕದ ಕರಾವಳಿ ಯಲ್ಲಿ 100ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರವಾಸಿ ತಾಣ ಗಳ ಜೊತೆ ಇಲ್ಲಿನ ಪಾರಂಪರಿಕತೆಯನ್ನೂ ಪರಿಚಯಿಸುವ ಅಗತ್ಯವಿದೆ. ಇಲ್ಲಿನ ಕರಕುಶಲ ವಸ್ತುಗಳು ಮತ್ತು ಸಂಸ್ಕೃತಿ ಕುರಿತು ಮಾಹಿತಿ ದೊರೆಯಬೇಕು. ಪ್ರಮುಖವಾಗಿ ಎಲ್ಲಡೆ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಜಿಪಂ ವತಿಯಿಂದ ಈಗಾಗಲೇ ಕಸ ಹಾಕುವ ಜಾಗವನ್ನು ಗುರುತಿಸಿ ಅಲ್ಲಿ ಸ್ವಚ್ಛತೆ ಮೂಡಿಸ ಲಾಗುತ್ತಿದೆ. ಜಿಲ್ಲೆಯನ್ನು ಬ್ಲಾಕ್‌ಸ್ಪಾಟ್ ಮುಕ್ತ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಕೊಡುಗೆ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ದೇಶಗಳನ್ನು ಸಂದರ್ಶಿಸಿ, ಅಲ್ಲಿನ ಪ್ರವಾಸಿ ತಾಣಗಳು ಮತ್ತು ಅವುಗಳ ಅಭಿವೃದ್ಧಿ ಕುರಿತು ಮಣಿಪಾಲ ಕೆಎಂಸಿಯ ಮೂಳೆತಜ್ಞ ಡಾ.ಕಿರಣ್ ಆಚಾರ್ಯ ಅವರು ಪ್ರವಾಸ ಕಥನ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಪೌರಾಯುಕ್ತ ಉದಯ್ ಶೆಟ್ಟಿ, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಸ್ವಾಗತಿಸಿದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







