ಮಂಗಳೂರು: ಅಸ್ಸಾಂ ಘಟನೆ ಖಂಡಿಸಿ ಪ್ರತಿಭಟನೆ

ಮಂಗಳೂರು, ಸೆ.27: ಅಸ್ಸಾಮಿನಲ್ಲಿ ಅಮಾಯಕ ಮುಸ್ಲಿಂ ವ್ಯಕ್ತಿಯ ಸರಕಾರಿ ಪ್ರಾಯೋಜಿತ ಕೊಲೆ ಕೃತ್ಯವನ್ನು ಖಂಡಿಸಿ ದ.ಕ.ಜಿಲ್ಲಾ ಎಸ್‌ಐಒ, ಜಿಐಒ ಹಾಗೂ ಸಾಲಿಡಾರಿಟಿ ಯೂತ್‌ಮೂವ್‌ಮೆಂಟ್ ಸೋಮವಾರ ನಗರದ ಕ್ಲಾಕ್‌ಟವರ್ ಮುಂದೆ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಐಒ ದ.ಕ. ಜಿಲ್ಲಾ ಕಾರ್ಯದರ್ಶಿ ನಿಹಾಲ್ ಕುದ್ರೋಳಿ, ದೇಶದಲ್ಲಿ ಅಮಾಯಕ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯವು ಹೆಚ್ಚುತ್ತಿದೆ. ಎನ್‌ಆರ್‌ಸಿ ಹೋರಾಟದ ಸಂದರ್ಭ ಹೊಸದಿಲ್ಲಿ, ಮಂಗಳೂರು ನಡೆದಿತ್ತು. ಈಗ ಅಸ್ಸಾಮಿನಲ್ಲಿ ಕಾಣಿಸಿವೆ. ರಾಜಕೀಯ ಕಾರಣಕ್ಕಾಗಿ ಜನರ ನಡುವೆ ದ್ವೇಷವನ್ನು ಬಿತ್ತುವ ಕೆಲಸವನ್ನು ಬಿಜೆಪಿ ಸರಕಾರಗಳು ಮಾಡುತ್ತಿವೆ. ಇದು ನಿಲ್ಲಬೇಕು ಎಂದರು.
ಅಸ್ಸಾಂ ಪೋಲೀಸರ ಗುಂಡೇಟಿಗೆ ಬಲಿಯಾದ ಅಸ್ಸಾಂನ ಕೂಲಿ ಕಾರ್ಮಿಕ ಮುಈನುಲ್ ಹಕ್‌ನ ಮೂವರು ಮಕ್ಕಳ ಮುಂದಿನ ಶಿಕ್ಷಣದ ಸಂಪೂರ್ಣ ಹೊಣೆಯನ್ನು ಎಸ್‌ಐಒ ವಹಿಸಿಕೊಂಡಿದೆ. ಎಸ್‌ಐಒ ರಾಷ್ಟ್ರೀಯ ಅಧ್ಯಕ್ಷ ಸಲ್ಮಾನ್ ಅಹ್ಮದ್‌ರು ಹಕ್‌ನ ಮನೆಗೆ ಭೇಟಿ ಕೊಟ್ಟಿದ್ದಾರೆ. ಮಕ್ಕಳಲ್ಲಿ ಧೈರ್ಯ ತುಂಬಿದ್ದಾರೆ. ಆ ಮಕ್ಕಳು ದೇಶದ ಉತ್ತಮ ಪ್ರಜೆಯಾಗಿ ಬೆಳೆಯಲಿ. ಇದುವೇ ಆ ಕ್ರೌರ್ಯಕ್ಕೆ ಮಾಡುವ ಅತ್ಯುತ್ತಮ ಮುಯ್ಯಿ ಎಂದು ಹೇಳಿದರು.
ಜಿಐಒ ಮಂಗಳೂರು ವಲಯ ಸಂಚಾಲಕಿ ಆಯಿಷಾ ತಬಸ್ಸುಮ್ ಮಾತನಾಡಿದರು. ಪ್ರತಿಭಟನೆಯಲ್ಲಿ ಎಸ್‌ಐಒ ದ.ಕ. ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರು, ಫಾರೂಕ್ ವಿಟ್ಲ, ಝಮೀರ್ ಪಕ್ಕಲಡ್ಕ, ಇಜಾಝ್ ಕುದ್ರೋಳಿ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ದ.ಕ.ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಳ್ಳಾಲ, ಫರ್ವೇಝ್, ಜಿಐಒ ಹುಮೈರಾ ಕುದ್ರೋಳಿ, ಹಿಬಾ ನೂರ್ , ಮುಶೀರಾ ಕಂದಕ್ ಮತ್ತಿತರರು ಪಾಲ್ಗೊಂಡಿದ್ದರು.












