70 ಸಾವಿರಕ್ಕೂ ಅಧಿಕ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಜಾಗತಿಕ ಮಾರಾಟಕ್ಕೆ ನೆರವಾಗಿದ್ದೇವೆ: ಅಮೆಝಾನ್
‘ಈಸ್ಟ್ ಇಂಡಿಯಾ 2.0’: ಪಾಂಚಜನ್ಯದ ಟೀಕೆಗೆ ಸ್ಪಷ್ಟನೆ

ಹೊಸದಿಲ್ಲಿ, ಸೆ.27: ಆನ್ಲೈನ್ ಶಾಪ್ಪಿಂಗ್ ಸಂಸ್ಥೆ ಅಮೆಝಾನ್ ಅನ್ನು ಈಸ್ಟ್ ಇಂಡಿಯಾ ಕಂಪೆನಿ 2.0 ಆಗಿದ್ದು, ಸ್ವದೇಶಿ ಉದ್ಯಮಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಆರೆಸ್ಸೆಸ್ ನ ಮುಖವಾಣಿ ಪಾಂಚಜನ್ಯದ ಟೀಕೆಗೆ ಪ್ರತಿಕ್ರಿಯಿಸಿರುವ ಸಂಸ್ಥೆಯು, ಮಾರಾಟಗಾರರು, ಕರಕುಶಲಕರ್ಮಿಗಳು ಹಾಗೂ ಪೂರೈಕೆ ಹಾಗೂ ಸಾಗಾಟ ಪಾಲುದಾರರು ಸೇರಿದಂತೆ ಸಣ್ಣ ಉದ್ಯಮಗಳ ಮೇಲೆ ತಾನು ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡಿರುವುದಾಗಿ ಸ್ಪಷ್ಟಪಡಿಸಿದೆ.
‘‘ಕೊರೋನ ಸಾಂಕ್ರಾಮಿಕದ ಹಾವಳಿಯ ಸಂದರ್ಭ ಮೂರು ಲಕ್ಷಕ್ಕೂ ಅಧಿಕ ಮಾರಾಟಗಾರರು ನಮ್ಮೊಂದಿಗೆ ಸೇರ್ಪಡೆಗೊಂಡಿದ್ದಾರೆ. ಅವರಲ್ಲಿ 75 ಸಾವಿರ ಮಂದಿ 450ಕ್ಕೂ ಅಧಿಕ ನಗರಗಳಲ್ಲಿನ ಪೀಠೋಪಕರಣ, ಸ್ಟೇಶನರಿ, ಗ್ರಾಹಕ ಇಲೆಕ್ಟ್ರಾನಿಕ್ಸ್, ಸೌಂದರ್ಯ ವರ್ಧಕ ಉತ್ಪನ್ನಗಳು, ಮೊಬೈಲ್ ಫೋನ್ಗಳು, ಜವಳಿ ಹಾಗೂ ವೈದ್ಯಕೀಯ ಉತ್ಪನ್ನಗಳ ಮಾರಾಟಗಾರರು’’ ಎಂದು ಅಮೆಝಾನ್ ಸೋಮವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಹಲವಾರು ಸಣ್ಣಪುಟ್ಟ ನಗರಗಳು, ಪಟ್ಟಣಗಳು ಸೇರಿದಂತೆ 70 ಸಾವಿರಕ್ಕೂ ಅಧಿಕ ಭಾರತೀಯ ಉದ್ಯಮಗಳು ತಮ್ಮ ಮೇಡ್ ಇಂಡಿಯಾ ಉತ್ಪನ್ನಗಳನ್ನು ಜಗತ್ತಿನಾದ್ಯಂತ ಮಾರಾಟ ಮಾಡಲು ತಾನು ನೆರವಾಗಿರುವುದಾಗಿಯೂ ಸಂಸ್ಥೆಯು ತಿಳಿಸಿದೆ.
ಪಾಂಚಜನ್ಯದ ಹೊಸ ಸಂಚಿಕೆಯಲ್ಲಿ ಅಮೆಝಾನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಬೆಝೋಸ್ ಅವರನ್ನು ಒಳಗೊಂಡ ಪತ್ರಿಕೆಯ ಮುಖಪುಟವನ್ನು, ಸಂಪಾದಕ ಹಿತೇಶ್ ಶಂಕರ್ ಟ್ವೀಟ್ ಮಾಡಿದ್ದರು. ಅಮೆಝಾನ್: ಈಸ್ಟ್ ಇಂಡಿಯಾ ಕಂಪೆನಿ 2.0’ ಎಂಬ ಲೇಖನದ ಶೀರ್ಷಿಕೆಯನ್ನು ಅದರಲ್ಲಿ ಬರೆಯಲಾಗಿತ್ತು.
ಭಾರತೀಯ ಅಧಿಕಾರಿಗಳಿಗೆ ಅಮೆಝಾನ್ ನ ಕಾನೂನು ಪ್ರತಿನಿಧಿಗಳು ಲಂಚ ನೀಡಿದ್ದಾರೆಂಬ ಆರೋಪಗಳನ್ನು ಕೂಡಾ ಟ್ವೀಟ್ ಮಾಡಲಾಗಿತ್ತು. ಆ ಕಂಪೆನಿಯು ಲಂಚನೀಡಲು ಅದೇನು ತಪ್ಪು ಮಾಡಿದೆ. ಈ ಕಂಪೆನಿಯು ಸ್ವದೇಶಿ ಉದ್ಯಮಶೀಲತೆ, ಆರ್ಥಿಕ ಸ್ವಾತಂತ್ರ ಹಾಗೂ ಸಂಸ್ಕೃತಿಗೆ ಬೆದರಿಕೆಯಾಗಿದೆಯೆಂದು ಜನರು ಯಾಕೆ ಪರಿಗಣಿಸುತ್ತಿದ್ದಾರೆ ಎಂದವರು ಹೇಳಿದರು.