ತಾಂತ್ರಿಕ ವಿಚಾರಣೆಗಳಿಂದಾಗಿ ಕೋವ್ಯಾಕ್ಸಿನ್ ಗೆ ಡಬ್ಲುಎಚ್ಒ ಅನುಮತಿ ಇನ್ನಷ್ಟು ವಿಳಂಬ
ಹೊಸದಿಲ್ಲಿ, ಸೆ.27: ವಿಶ್ವ ಆರೋಗ್ಯ ಸಂಸ್ಥೆ (ಡ ಬ್ಲಎಚ್ ಒ)ಯು ಭಾರತದಲ್ಲಿ ತಯಾರಾಗಿರುವ ಕೋವ್ಯಾಕ್ಸಿನ್ ಲಸಿಕೆಯ ಕುರಿತು ಇನ್ನಷ್ಟು ಪ್ರಶ್ನೆಗಳನ್ನು ಉತ್ಪಾದನಾ ಸಂಸ್ಥೆ ಭಾರತ ಬಯೊಟೆಕ್ ಗೆ ಕಳುಹಿಸಿದ್ದು,ಇದು ಲಸಿಕೆಯ ತುರ್ತು ಬಳಕೆಗೆ ಅನುಮತಿ (ಇಯುಎ)ಯನ್ನು ಇನ್ನಷ್ಟು ವಿಳಂಬಗೊಳಿಸಿದೆ. ಈ ವಿಳಂಬವು ಭಾರತೀಯರ, ವಿಶೇಷವಾಗಿ ವಿದ್ಯಾರ್ಥಿಗಳ ವಿದೇಶ ಪ್ರಯಾಣ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು ಎನ್ನಲಾಗಿದೆ.
ಡಬ್ಲುಎಚ್ಒದ ಇಎಯು ಇಲ್ಲದೆ ವಿಶ್ವದ ಹೆಚ್ಚಿನ ದೇಶಗಳು ಕೋವ್ಯಾಕ್ಸಿನ್ ಗೆ ಮಾನ್ಯತೆಯನ್ನು ನೀಡುವುದಿಲ್ಲ. ಅನುಮತಿಗೆ ಅಗತ್ಯವಾದ ಎಲ್ಲ ದತ್ತಾಂಶಗಳನ್ನು ತಾನು ಸಲ್ಲಿಸಿರುವುದಾಗಿ ಭಾರತ ಬಯೊಟೆಕ್ ಒತ್ತಿ ಹೇಳಿದ್ದರೂ ಡಬ್ಲುಎಚ್ಒ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ಬಯಸಿದೆ.
ಡಬ್ಲುಎಚ್ಒ ಕೋವ್ಯಾಕ್ಸಿನ್ ಗೆ ಶೀಘ್ರವೇ ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ಶುಕ್ರವಾರ ಹೇಳಿತ್ತು. ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗಳು ಶೇ.77.8ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿವೆ ಎಂದು ಭಾರತ ಬಯೊಟೆಕ್ ಹೇಳಿದೆ.