ಪೊಲೀಸರ ವಿರುದ್ಧ ದೂರು ನೀಡಲು ಪ್ರತೀ ಜಿಲ್ಲೆಯಲ್ಲಿ ದೂರು ಕೇಂದ್ರ ಸ್ಥಾಪನೆ: ಆರಗ ಜ್ಞಾನೇಂದ್ರ

ಮೈಸೂರು, ಸೆ.28: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ದೂರು ನೀಡಲು ಪ್ರತಿ ಜಿಲ್ಲೆಯಲ್ಲಿ ದೂರು ಕೇಂದ್ರ ಸ್ಥಾಪನೆ ಮಾಡಲು ಚಿಂತಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯಿತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ 6ನೇ ತಂಡದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಹಾಗೂ ವಿಜೇತರಿಗೆ ಬಹುಮಾನ ವಿತರಿಸಿ ನಂತರ ಅವರು ಮಾತನಾಡುತ್ತಿದ್ದರು.
ತಪ್ಪು ಮಾಡುವ ಮತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸರಿಗೂ ಶಿಕ್ಷೆಯಾಗಬೇಕು. ಹಾಗಾಗಿ ಜಿಲ್ಲಾ ಕೇಂದ್ರಗಳಲ್ಲಿ ದೂರು ಕೇಂದ್ರ ತೆರೆಯಲು ಚಿಂತಿಸಲಾಗುತ್ತಿದೆ ಎಂದರು.
ಜನರ ಮಾನ, ಪ್ರಾಣ, ಆಸ್ತಿಯನ್ನು ಸಂರಕ್ಷಿಸಬೇಕಾದ ಪೊಲೀಸರೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಹೇಗೆ? ಅಂತಹ ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನಮ್ಮ ಉದ್ದೇಶ. ಹಾಗಾಗಿ ಪೊಲೀಸರ ವಿರುದ್ಧ ದೂರು ನೀಡಲು ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಧೈರ್ಯವಾಗಿ ಸಾರ್ವಜನಿಕರು ದೂರು ನೀಡಬಹುದು. ದೂರು ನೀಡಲು ಎರಡು ದೂರವಾಣಿ ಸಂಖ್ಯೆಗಳನ್ನು ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ.ಧರಣೀದೇವಿ ಮಾಲಗತ್ತಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.







