ದತ್ತಪೀಠದ ಪೂಜಾ ಕೈಂಕರ್ಯಗಳಿಗೆ ಮುಜಾವರ್ ನೇಮಕ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಸೆ.28: ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿ ದತ್ತಪೀಠದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ ಮಾಡಿ 2018ರ ಮಾ.19ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
ಸರಕಾರದ ಆದೇಶ ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ. ಸರಕಾರದ ಆದೇಶವನ್ನು ರದ್ದುಪಡಿಸಿದೆ.
ಪ್ರಕರಣವನ್ನು ಹೊಸದಾಗಿ ಪರಿಗಣಿಸಿ, ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸುತ್ತಿದ್ದೇನೆ. ಉನ್ನತಮಟ್ಟದ ಸಮಿತಿಯ ವರದಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ ಎಂದು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ತೀರ್ಪಿನಲ್ಲಿ ಹೇಳಿದೆ.
ಅರ್ಜಿ ಕುರಿತು ಸುದೀರ್ಘ ವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ 2021ರ ಆಗಸ್ಟ್ ತಿಂಗಳಲ್ಲಿ ತೀರ್ಪು ಕಾಯ್ದಿರಿಸಿತ್ತು.
ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಮಾ.19ರ ಆದೇಶ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರಕಾರ ನೀಡಿದ್ದ ಮುಚ್ಚಳಿಕೆ ಆಧರಿಸಿ, ದತ್ತ ಪೀಠದ ಪೂಜಾ ವಿಧಿ ವಿಧಾನದ ಬಗ್ಗೆ ಯಾವುದೇ ಆತುರದ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಈ ಆದೇಶವನ್ನು ಕಾಲ ಕಾಲಕ್ಕೆ ವಿಸ್ತರಿಸಿಕೊಂಡು ಬಂದಿತ್ತು.
ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಉನ್ನತಮಟ್ಟದ ಸಮಿತಿ ನೀಡಿರುವ ವರದಿ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಆ ವರದಿ ಆಧರಿಸಿ ರಾಜ್ಯ ಸರಕಾರ ಮುಜಾವರ್ ನೇಮಕ ಮಾಡಿದೆ. ಹಿಂದೂಗಳ ಪೂಜಾಸ್ಥಳದ ಧಾರ್ಮಿಕ ಆಚರಣೆಗಳನ್ನು ಮುಜಾವರ್‌ಗಳು ನಡೆಸಿಕೊಡಬೇಕು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರಕಾರದ ನಿರ್ಧಾರ ಹಿಂದೂಗಳ ಭಾವನೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.







