"ನಾನು ಹೇಳಿದ್ದೆ, ಆತ ಸ್ಥಿರ ಮನುಷ್ಯನಲ್ಲವೆಂದು": ಸಿಧು ರಾಜೀನಾಮೆಯ ಬಳಿಕ ಅಮರಿಂದರ್ ಹೇಳಿಕೆ
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್ ಸಿಂಗ್ ಸಿಧು ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮಂಗಳವಾರ "ಅವರು ಸ್ಥಿರ ಮನುಷ್ಯನಲ್ಲ" ಎಂದು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ.
"ನಾನು ನಿಮಗೆ ಹೇಳಿದ್ದೇನೆ, ಆತ ಸ್ಥಿರ ಮನುಷ್ಯನಲ್ಲ ಮತ್ತು ಗಡಿಪ್ರದೇಶವಾದ ಪಂಜಾಬ್ ಗೆ ಸರಿಹೊಂದುವುದಿಲ್ಲವೆಂದು" ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ನವಜೋತ್ ಸಿಧು ಅವರು ಪಕ್ಷದ ಸೇವೆ ಮುಂದುವರಿಸುವುದಾಗಿ ಹೇಳಿದ್ದಾರೆ. ಸಿದ್ದು ಈ ವರ್ಷದ ಜುಲೈನಲ್ಲಿ ಪಕ್ಷದ ರಾಜ್ಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.
"ರಾಜಿಯಾಗುವ ಮೂಲಕ ಮನುಷ್ಯ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಆರಂಭಿಸುತ್ತಾನೆ. ಪಂಜಾಬ್ ನ ಭವಿಷ್ಯ ಮತ್ತು ಕಲ್ಯಾಣದ ವಿಚಾರದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ನಲ್ಲಿ ನನ್ನ ಸೇವೆ ಮುಂದುವರಿಸುತ್ತೇನೆ" ಎಂದು ಸಿಧು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದರು.
ಅಮರೀಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂಬ ಊಹಾಪೋಹಗಳ ನಡುವೆ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.