"ಯಾರೂ ಕಾನೂನಿಗಿಂತ ಮಿಗಿಲಲ್ಲ": ಸೌರವ್ ಗಂಗೂಲಿಗೆ ಸೈಟ್ ಮಂಜೂರಾತಿ ರದ್ದುಗೊಳಿಸಿದ ಕೊಲ್ಕತ್ತಾ ಹೈಕೋರ್ಟ್

ಕೋಲ್ಕತಾ,ಸೆ.28: ಪ.ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎಚ್ಐಡಿಸಿ)ವು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಉತ್ತರ 24 ಪರಗಣಗಳ ಜಿಲ್ಲೆಯ ನ್ಯೂ ಟೌನ್ ಪ್ರದೇಶದಲ್ಲಿ ಭೂಮಿ ಹಂಚಿಕೆ ಮಾಡಿದ್ದನ್ನು ಕಲ್ಕತ್ತಾ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.
ಸೋಮವಾರ ತೀರ್ಪನ್ನು ಪ್ರಕಟಿಸಿದ ಪ್ರಭಾರ ಮುಖ್ಯ ನ್ಯಾಯಮೂರ್ತಿ ರಾಜೇಶ ಬಿಂದಾಲ್ ಮತ್ತು ನ್ಯಾ.ಅರಿಜಿತ್ ಬ್ಯಾನರ್ಜಿ ಅವರ ಪೀಠವು ಪ.ಬಂಗಾಳ ಸರಕಾರ ಮತ್ತು ಎಚ್ಐಡಿಸಿಗೆ ತಲಾ 50,000 ರೂ.ಗಳ ದಂಡವನ್ನು ವಿಧಿಸಿತು.
ಗಂಗೂಲಿ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿತ್ತು ಎಂದು ಹೇಳಿದ ನ್ಯಾಯಾಲಯವು ಅವರಿಗೆ ಮತ್ತು ಅವರ ಗಂಗೂಲಿ ಎಜ್ಯುಕೇಶನ್ ಆ್ಯಂಡ್ ವೆಲ್ಫೇರ್ ಸೊಸೈಟಿಗೂ ತಲಾ 10,000 ರೂ.ಗಳ ದಂಡವನ್ನು ವಿಧಿಸಿತು.
ನಿಯಮಗಳು,ನಿಬಂಧನೆಗಳು ಮತ್ತು ನೀತಿಗಳನ್ನು ಉಲ್ಲಂಘಿಸಿ ಗಂಗೂಲಿ ಗೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಅರ್ಜಿದಾರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿತ್ತು.
2011ರಲ್ಲಿ ಗಂಗೂಲಿ ಗೆ ಭೂಮಿ ಹಂಚಿಕೆಯನ್ನು ತಳ್ಳಿಹಾಕಿದ್ದ ಸರ್ವೋಚ್ಚ ನ್ಯಾಯಾಲಯವು,ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಶಾಲೆಯೊಂದರ ನಿರ್ಮಾಣಕ್ಕೆ ಭೂಮಿ ಹಂಚಿಕೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಪ.ಬಂಗಾಳ ಸರಕಾರವನ್ನು ಸಂಪರ್ಕಿಸಿದ್ದ ಗಂಗುಲಿ ನಿವೇಶನಕ್ಕಾಗಿ ಕೋರಿಕೆಯನ್ನು ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ್ದ ಪ.ಬಂಗಾಳ ಸರಕಾರವು ಸೂಕ್ತ ವಿಧಿವಿಧಾನಗಳನ್ನು ಅನುಸರಿಸದೆ ಅವರಿಗೆ 2013ರಲ್ಲಿ ಭೂಮಿಯನ್ನು ಹಂಚಿಕೆ ಮಾಡಿತ್ತು.
ಲೀಸ್ ಮೊತ್ತವನ್ನು 10.98 ಕೋ.ರೂ.ಗಳಿಂದ 5.27 ಕೋ.ರೂ.ಗೆ ತಗ್ಗಿಸುವ ಮೂಲಕ ಅದು ಗಂಗುಲಿ ಬಗ್ಗೆ ಒಲವನ್ನೂ ಪ್ರದರ್ಶಿಸಿತ್ತು ಅರ್ಜಿದಾರರು ತಿಳಿಸಿದದ್ದರು. ಗಂಗುಲಿ ಕಾನೂನುಬದ್ಧವಾಗಿ ಅರ್ಜಿಯನ್ನು ಸಲ್ಲಿಸಿರಲಿಲ್ಲ ಮತ್ತು ತನ್ನ ಪ್ರಭಾವವನ್ನು ಬಳಸಿಕೊಂಡು ಸರಕಾರವನ್ನು ನೇರವಾಗಿ ಸಂಪರ್ಕಿಸಿದ್ದರು ಎಂದೂ ಅರ್ಜಿದಾರರು ವಾದಿಸಿದ್ದರು.







