ಜ್ಞಾನದ ಬಲದಿಂದ ಸವಾಲುಗಳಿಗೆ ಪರಿಹಾರ: ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಲಹೆ

ಬೆಂಗಳೂರು: ಪದವಿ ಪಡೆದು ವೃತ್ತಿ ಬದುಕಿಗೆ ಕಾಲಿಟ್ಟಾಗ ಸವಾಲುಗಳಿಗೆ ಎದೆಗುಂದಬಾರದು ಹಾಗೂ ನಕಾರಾತ್ಮಕ ವಾತಾವರಣದಿಂದ ನಿರುತ್ಸಾಹಗೊಳ್ಳಬಾರದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸೌಂದರ್ಯ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಸೈನ್ಸ್‍ನಲ್ಲಿ ಮಂಗಳವಾರ ನಡೆದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬದುಕಿನಲ್ಲಿ ಅಡೆತಡೆಗಳು, ಸವಾಲುಗಳು ಇದ್ದೇ ಇರುತ್ತವೆ. ಆದರೆ ಅವುಗಳಿಗೆ ಜ್ಞಾನದ ಬಲದಿಂದ ಉತ್ತರವನ್ನು ಕಂಡುಕೊಳ್ಳಬೇಕು ಎಂದರು.
ಸಮಾಜಕ್ಕೆ ಉಪಯೋಗವಾಗುವಂತೆ ಬದುಕುವುದು ನಮ್ಮ ಅಂತಿಮ ಗುರಿಯಾಗಿರಬೇಕು. ವಿದ್ಯಾರ್ಥಿ ಜೀವನ ಮುಗಿಸಿ ವೃತ್ತಿ ಬದುಕಿಗೆ ಇಳಿದಾಗ ಸ್ವಂತಿಕೆಯ ಬಲದ ಮೇಲೆಯೇ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಈ ವರ್ಷದಿಂದ ಶಿಕ್ಷಣ ಕ್ರಮದಲ್ಲಿ ಮಹತ್ವದ ಬದಲಾವಣೆಗಳಾಗುತ್ತವೆ. ವಿದ್ಯಾರ್ಥಿಗಳಿಗೆ ಜ್ಞಾನ ಹಾಗೂ ಕೌಶಲಗಳನ್ನು ಮೈಗೂಡಿಸಲು ಸಾಕಷ್ಟು ಸುಧಾರಣೆಗಳನ್ನು ತರಲಾಗುತ್ತದೆ. ಗುಣಮಟ್ಟದ ಶಿಕ್ಷಣದ ಬಲದಿಂದ ಯುವಜನಾಂಗವನ್ನು ಜಾಗತಿಕ ಸ್ಪರ್ಧೆಗೆ ಅಣಿಯಾಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಸ್ಥಾಪಕ ಸೌಂದರ್ಯ ಮಂಜಪ್ಪ, ಸಿಇಒ ಕೀರ್ತನ್ ಕುಮಾರ್, ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ.ಶಿವಪ್ರಸಾದ್, ಭಾರತದ ಬ್ಯಾಸ್ಕೆಟ್ ಬಾಲ್ ವನಿತೆಯರ ತಂಡದ ಕೋಚ್ ಸಚ್ಚಿನ್ ಬೆಳವಾಡಿ, ಪ್ರಾಂಶುಪಾಲ ಡಾ.ಸುರೇಶ್, ಉಪ ಪ್ರಾಂಶುಪಾಲ ಶಿವಕುಮಾರ್, ಸುಮಿತ್ರಾ ಮಂಜಪ್ಪ, ಡಾ.ಪ್ರತೀಕ್ಷಾ ಮತ್ತಿತರರು ಇದ್ದರು.







