ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ಯುವಕರ ಅಡ್ಡಗಟ್ಟಿ ಹಲ್ಲೆ; ಐವರ ವಿರುದ್ಧ ಪ್ರಕರಣ ದಾಖಲು
ಸಂಘಪರಿವಾರದ ಕಾರ್ಯಕರ್ತರಿಂದ ಅನೈತಿಕ ಪೊಲೀಸ್ ಗಿರಿ

ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಗಳನ್ನು ತಡೆದು ಹಲ್ಲೆ ನಡೆಸಿ ಅನೈತಿಕ ಪೊಲೀಸ್‍ಗಿರಿ ಮೆರೆದಿರುವ ಘಟನೆಯೊಂದು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಸಂಬಂಧ ಸಂಘಪರಿವಾರದ ಪ್ರಮುಖ ಮುಖಂಡ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ.
ಚಿಕ್ಕಮಗಳೂರು ನಗರದ ಖಾಸಗಿ ಕಾಲೇಜಿನ ಯುವಕ, ಯುವತಿಯರ ತಂಡ ಇತ್ತೀಚೆಗೆ ತಾಲೂಕಿನ ಹಿರೇಕೊಳಲೆಗೆ ಪ್ರವಾಸಕ್ಕೆ ತೆರಳಿ ಅಲ್ಲಿಂದ ಮುಳ್ಳಯ್ಯನಗಿರಿಯತ್ತ ತೆರಳುತ್ತಿದ್ದ ವೇಳೆ ಸಂಘಪರಿವಾರದ ಯುವಕರ ಗುಂಪು ಕಾರನ್ನು ಅಡ್ಡಗಟ್ಟಿದೆ. ಬಳಿಕ ಕಾರಿನಲ್ಲಿದ್ದ ಯುವಕರನ್ನು ಕೆಳಗಿಳಿಸಿ ತೀವ್ರ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಕಾರಿನಲ್ಲಿ ಅನ್ಯ ಕೋಮಿನ ಯುವಕರೊಂದಿಗೆ ಕೆಲ ಯುವತಿಯರಿದ್ದರೆಂದು ಆರೋಪಿಸಿದ ಸಂಘಪರಿವಾರದ ಯುವಕರು ಕಾರಿನಲ್ಲಿದ್ದ ಯುವಕರಿಗೆ ಹಲ್ಲೆ ನಡೆಸಿಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಯುವತಿಯರು ತಮ್ಮ ಸ್ವಂತ ಕಾರಿನಲ್ಲಿ ಸಹೋದರರೊಂದಿಗೆ ಪ್ರವಾಸಕ್ಕೆ ತೆರಳುತ್ತಿರುವುದಾಗಿ ಹೇಳಿದರೂ ಕೇಳದ ಸಂಘಪರಿವಾರದ ಕಾರ್ಯಕರ್ತರು ಯುವಕರಿಗೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ.
ಈ ಘಟನೆ ಸಂಬಂಧ ಹಲ್ಲೆಗೊಳಗಾದ ಯುವಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸಂಘಪರಿವಾರದ ಪ್ರಮುಖ ಮುಖಂಡ ಸಂತೋಷ್ ಕೋಟ್ಯಾನ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.







