ಡೊಂಬಿವಲಿಯ: ಕರ್ನಾಟಕ ಸಂಘದಿಂದ ಕೃತಿ ಸಮೀಕ್ಷೆ ಕಾರ್ಯಕ್ರಮ

ಮುಂಬೈ, ಸೆ.28: ಇಂದಿನ ವಾಟ್ಸ್ ಆ್ಯಪ್ ಯುಗದಲ್ಲಿ ಗ್ರಂಥಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಡೊಂಬಿವಲಿಯದ ಪೂರ್ವ ಹಾಗೂ ಪಶ್ಚಿಮ ಎರಡೂ ಕಡೆ ಬೃಹತ್ ಗ್ರಂಥಾಲಯ ಇದೆ. ಇದರ ಪ್ರಯೋಜನವನ್ನು ಇಲ್ಲಿನ ಕನ್ನಡಿಗರು ಪಡೆಯಬೇಕು ಎಂದು ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಕರೆ ನೀಡಿದ್ದಾರೆ. ಕರ್ನಾಟಕ ಸಂಘದ ವಾಚನಾಲಯ ವಿಭಾಗ ಆಯೋಜಿಸಿದ್ದ ಕೃತಿ ಸಮೀಕ್ಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಕಾರ್ಯಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಮಾತನಾಡಿ, ಈಗಂತೂ ಒಳ್ಳೆಯ ಸಾಹಿತ್ಯ ಕೃತಿಗಳು ಸಾಹಿತ್ಯಾಸಕ್ತರಿಗೆ ಸರಿಯಾಗಿ ದೊರೆಯುತ್ತಿಲ್ಲ. ಅಂತಹ ಕೃತಿಗಳ ಬಗ್ಗೆ ಸಾಹಿತ್ಯಾಸಕ್ತರಿಗೆ, ಸಹೃದಯರಿಗೆ ಸೂಕ್ಷ್ಮವಾಗಿ ಮನಸ್ಸಿಗೆ ಮುಟ್ಟಿಸುವುದೇ ಈ ಸಮೀಕ್ಷೆಯ ಉದ್ದೇಶ ಎಂದರು. ಕೃತಿ ಸಮೀಕ್ಷೆಯಲ್ಲಿ ನಾಗರಾಜ ವಸ್ತಾರೆ ಅವರ ‘ಪ್ರಿಯೇ ಚಾರುಶೀಲೆ’ ಕಾದಂಬರಿ ಬಗ್ಗೆ ಸಾ.ದಯಾ: ಬಾಬು ಶಿವ ಪೂಜಾರಿಯವರ ಶ್ರೀ ನಾರಾಯಣ ಗುರು ವಿಜಯ ದರ್ಶನ ಇದರ ಬಗ್ಗೆ ಅನಿತಾ ಪೂಜಾರಿ ತಾಕೋಡೆ ಹಾಗೂ ಸನತ್ ಕುಮಾರ್ ಜೈನ್ ಅವರ ಸನ್ನಿಧಿ ಕೃತಿಯ ಬಗ್ಗೆ ಅಂಜಲಿ ತೊರವಿ ಸಮೀಕ್ಷೆ ಮಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ದೇವದಾಸ್ ಕುಲಾಲ್, ದಿನೇಶ್ ಕುಡ್ವ, ಲೋಕನಾಥ್ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ, ಪ್ರಭಾಕರ ಆರ್. ಶೆಟ್ಟಿ ಸ್ವಾಗತಿಸಿದರು. ಸಂಘದ ಮಹಿಳಾ ವಿಭಾಗದ ಸುಷ್ಮಾ ಶೆಟ್ಟಿ, ಯೋಗಿನಿ ಶೆಟ್ಟಿ, ವಿಮಲಾ ಶೆಟ್ಟಿ, ಮಾಧುರಿಕ ಬಂಗೇರ ಅತಿಥಿಗಳನ್ನು ಗೌರವಿಸಿದರು. ಸುನಂದಾ ಶೆಟ್ಟಿ ಪ್ರಾರ್ಥಿಸಿದರು. ವಾಚನಾಲಯ ವಿಭಾಗದ ಕಾರ್ಯದರ್ಶಿ ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









