ಅಮೆರಿಕದಲ್ಲಿ ಹತ್ಯೆ ಪ್ರಕರಣ ಹೆಚ್ಚಳ: ಎಫ್ಬಿಐ ವರದಿ
ವಾಷಿಂಗ್ಟನ್, ಸೆ.28: ಕಳೆದ ವರ್ಷಕ್ಕೆ ಹೋಲಿಸಿದರೆ ಅಮೆರಿಕದಲ್ಲಿ 2020ರಲ್ಲಿ ಕೊಲೆಯ ಪ್ರಕರಣಗಳು 30% ಏರಿಕೆಯಾಗಿದ್ದು 21,500 ಕೊಲೆ ಪ್ರಕರಣ ವರದಿಯಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ಹೇಳಿದೆ. ಅಮೆರಿಕದ ಹಲವು ನಗರಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹತ್ಯೆಯ ಪ್ರಕರಣ ಹೆಚ್ಚಿರುವ ಬಗ್ಗೆ ವರದಿಯಾಗಿದೆ.
1960ರಲ್ಲಿ ಅಪರಾಧ ಕೃತ್ಯಗಳ ದಾಖಲೀಕರಣ ಆರಂಭವಾಗಿದ್ದು, ಇದುವರೆಗಿನ ಮಾಹಿತಿ ಪ್ರಕಾರ 2020ರಲ್ಲಿ ಅತ್ಯಧಿಕ ಕೊಲೆ ಪ್ರಕರಣ ವರದಿಯಾಗಿದೆ. ಆದರೆ ಹತ್ಯೆಯಾದವರ ಸಂಖ್ಯೆ ಮಾತ್ರ 1980ರಲ್ಲಿ ಅಧಿಕವಾಗಿದೆ ಎಂದು ಎಫ್ಬಿಐ ಹೇಳಿದೆ.
ಕಳೆದ ವರ್ಷದ ಜೂನ್ನಿಂದ ಹತ್ಯೆ ಪ್ರಕರಣ ಕ್ರಮೇಣ ಹೆಚ್ಚಿದ್ದು ದಕ್ಷಿಣದ ಲೂಸಿಯಾನಾ ರಾಜ್ಯದಲ್ಲಿ ಅತ್ಯಧಿಕ ಕೊಲೆ ಪ್ರಕರಣ ವರದಿಯಾಗಿದೆ. 2020ರಲ್ಲಿ ನಡೆದ ಹತ್ಯೆಯಲ್ಲಿ 77%ದಷ್ಟು ಗುಂಡಿನ ದಾಳಿಯಿಂದ ನಡೆದಿದ್ದು 2019ರಲ್ಲಿ ಈ ಪ್ರಮಾಣ 74% ಆಗಿತ್ತು. ಸುಮಾರು 16,000 ಫೆಡರಲ್, ರಾಜ್ಯ, ನಗರ, ವಿವಿ, ಕಾಲೇಜು ಮತ್ತು ಬುಡಕಟ್ಟು ಮಂಡಳಿಗಳು ನೀಡಿದ ದಾಖಲೆಯನ್ನು ಆಧರಿಸಿ ಈ ಅಪರಾಧ ವರದಿ ತಯಾರಿಸಲಾಗಿದೆ ಎಂದು ಎಫ್ಬಿಐ ಹೇಳಿದೆ.





