ಕ್ರೈಸ್ತ ಧರ್ಮಪಾಲಕರನ್ನು ಅವಹೇಳನ ಮಾಡುವುದು ಸರಿಯಲ್ಲ: ಡೇವಿಡ್ ಸಿಮೆಯೋನ್
ಬೆಂಗಳೂರು, ಸೆ.28: ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕ್ರೈಸ್ತ ಧರ್ಮಪಾಲಕರನ್ನು ಅವಹೇಳನ ಮಾಡಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ. ಕ್ರೈಸ್ತ ಮಿಷನರಿಗಳು ಬಲವಂತವಾಗಿ ಮತಾಂತರ ಮಾಡುತ್ತಿಲ್ಲ. ಒಂದು ವೇಳೆ ಮತಾಂತರಗೊಳ್ಳುವಂತೆ ಬಲವಂತಪಡಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದನ್ನು ಹೊರತುಪಡಿಸಿ ಅನವಶ್ಯಕವಾಗಿ ಕ್ರೈಸ್ತರನ್ನು ನಿಂದಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರೆಸ್‍ಕ್ಲಬ್‍ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೂಳಿಹಟ್ಟಿ ಶೇಖರ್ ಅವರ ತಾಯಿಯು ಸ್ವಯಂಪ್ರೇರಿತವಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಅವರನ್ನು ಯಾರು ಬಲವಂತಪಡಿಸಲಿಲ್ಲ. ಹಾಗೆಯೇ ಆ ಪ್ರದೇಶದಲ್ಲಿನ ಜನರು ಸಹ ಮತಾಂತರಗೊಂಡಿದ್ದಾರೆ. ಮಿಷನರಿಗಳು ಅವರನ್ನು ಬಲವಂತವಾಗಿ ಮತಾಂತರಗೊಳಿಸಿಲ್ಲ. ಆಮಿಷ ಒಡ್ಡಿ ಮತಾಂತರ ಮಾಡುವ ಪದ್ಧತಿಯನ್ನು ಕ್ರೈಸ್ತಧರ್ಮವು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಮೀಸಲಾತಿಗೆ ಸಂಬಂಧಿಸಿದಂತೆ ರಂಗನಾಥ ಮಿಶ್ರಾ ಅವರ ವರದಿಯನ್ನು ಜಾರಿಗೊಳಿಸಬೇಕು ಎಂದ ಅವರು, ಇತ್ತೀಚಿಗೆ ರಾಜ್ಯದಲ್ಲಿ ದೇವಾಲಯಗಳನ್ನು ಧ್ವಂಸ ಮಾಡಿರುವುದು ಖಂಡನೀಯ. ಈ ಕುರಿತು ವಿಧಾನ ಪರಿಷತ್‍ನಲ್ಲಿ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬಾರದೆಂಬ ಸರಕಾರದ ನಿರ್ಣಯವನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ದಲಿತ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಡಾ. ಮನೋಹರ್ ಚಂದ್ರಪ್ರಸಾದ್, ಡಾ. ಡೇವಿಡ್ ದಾಸ್, ಜೆ.ಎ.ರಾಜೇಂದ್ರನ್, ರವಿಕುಮಾರ್, ಚೆಲ್ಲಾ ದೊರೆಸ್ವಾಮಿ ಅವರು ಭಾಗವಹಿಸಿದ್ದರು.







