35 ವಿಶಿಷ್ಟ ಬೆಳೆತಳಿಗಳು ದೇಶಕ್ಕೆ ಸಮರ್ಪಣೆ: ಐಸಿಎಆರ್ನಿಂದ ಅಭಿವೃದ್ಧಿ
ಅಧಿಕ ಪೌಷ್ಟಿಕಾಂಶ, ಬರ, ಹವಾಮಾನ ವೈಪರೀತ್ಯ ಎದುರಿಸ ಬಲ್ಲ ಸಾಮರ್ಥ್ಯ
ಹೊಸದಿಲ್ಲಿ, ಸೆ.28: ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ಐಸಿಎಆರ್)ವು ಅಭಿವೃದ್ಧಿಪಡಿಸಿರುವ ವಿಶೇಷ ಲಕ್ಷಣಗಳನ್ನು ಒಳಗೊಂಡ ಸುಮಾರು 35 ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶಕ್ಕೆ ಸಮರ್ಪಿಸಿದ್ದಾರೆ. ಹವಾಮಾನ ಬದಲಾವಣೆ ಹಾಗೂ ಅಪೌಷ್ಟಿಕತೆಯಂತಹ ಅವಳಿ ಸವಾಲುಗಳನ್ನು ಎದುರಿಸಲು ಈ ಬೆಳೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ದೇಶಾದ್ಯಂತ ಎಲ್ಲಾ ಐಸಿಎಆರ್ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯೋಜಿಸಲಾದ ವಿಡಿಯೋ ಕಾನ್ಫರೆನ್ಸ್ ಮೂಲಕ ನೂತನ ಬೆಳೆ ತಳಿಗಳನ್ನು ದೇಶಕ್ಕೆ ಸಮರ್ಪಿಸಲಾಯಿತು. ಹವಾಮಾನ ವೈಪರೀತ್ಯವನ್ನು ಎದುರಿಸುವ ಸಾಮರ್ಥ್ಯ ಹಾಗೂ ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿರುವ 35 ಬೆಳೆ ತಳಿಗಳನ್ನು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಬರವನ್ನು ಸಹಿಸಿಕೊಳ್ಳಬಲ್ಲ ಕಡಲೆ ತಳಿ, ಒಣಪರಿಸರ ಹಾಗೂ ಸ್ಟರಿಲಿಟಿ ಮೊಸಾಯಿಕ್ ಎಂಬ ಕೀಟ ನಿರೋಧಕ ತೊಗರಿ, ತ್ವರಿತವಾಗಿ ಪಕ್ವವಾಗುವ ಸೋಯಾಬಿನ್ ತಳಿ, ರೋಗ ನಿರೋಧಕ ಬತ್ತದ ತಳಿಗಳು ಹಾಗೂ ಗೋದಿ, ಸಿರಿಧಾನ್ಯ, ಮೆಕ್ಕೆ ಜೋಳ, ತೊಗರಿಬೇಳೆ, ನವಣೆ,ಹುರುಳಿ,ರೆಕ್ಕೆ ಬೀನ್ಸ್ ಹಾಗೂ ಫಬಾ ಬೀನ್ಸ್ ನ ತಳಿಗಳು ಇವುಗಳಲ್ಲಿ ಒಳಗೊಂಡಿವೆ.
ಕೆಲವು ಬೆಳೆಗಳಲ್ಲಿ ಪತ್ತೆಯಾಗಿರುವ ಮಾನವ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರವಂತಹ ಪೌಷ್ಟಿಕಾಂಶರಹಿತತೆಯ ಸಮಸ್ಯೆಯನ್ನು ನಿವಾರಿಸಲು ಈ ಬೆಳೆ ತಳಿಗಳು ನೆರವಾಗಲಿವೆ.
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಾರ್ ಮಾತನಾಡಿ, ದೇಶದ ಶೇಕಡ 86 ರಷ್ಟು ರೈತರು ಸಣ್ಣ ಪ್ರಮಾಣದ ಕೃಷಿಕರಾಗಿದ್ದು, ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ತನ್ನ ಗಮನವನ್ನು ಹರಿಸಿದ್ದಾರೆಂದು ತಿಳಿಸಿದರು.
ರೈತರು ಇತರರ ಅನುಕಂಪದ ನೆರಳಲ್ಲಿ ಜೀವಿಸಬಾರದು, ಅವರು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಮೇಲೆ ಬರಬೇಕೆಂದು ಪ್ರಧಾನಿಯವರು ನಂಬಿದ್ದಾರೆ. ರೈತರನ್ನು ಸಬಲೀಕರಣಗೊಳಿಸಲು ಅವರು ಪಿಎಂ-ಕಿಸಾನ್ನಂತಹ ಹಲವಾರು ಕಾರ್ಯಕ್ರಮಗಳು ಮತ್ತು ರೈತರ ಉತ್ಪನ್ನಗಳ ಸಾಗಾಟಕ್ಕಾಗಿ ಕಿಸಾನ್ ರೈಲುಗಳನ್ನು ಆರಂಭಿಸಿದ್ದಾರೆಂದು ತಿಳಿಸಿದರು.
ಚತ್ತೀಸ್ಗಢದ ರಾಯ್ಪುರದಲ್ಲಿ ನೂತನವಾಗಿ ನಿರ್ಮಿಸಲಾದ ರಾಷ್ಟ್ರೀಯ ಬಯೋಟೆಕ್ ಸ್ಟ್ರೆಸ್ಟಾಲರೆನ್ಸ್ ಕ್ಯಾಂಪಸ್ ನ ಕಟ್ಟಡದ ಉದ್ಘಾಟಿಸಿದ್ದಕ್ಕಾಗಿ ಚತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಅವರು ಪ್ರಧಾನಿಯವರನ್ನು ಅಭಿನಂದಿಸಿದರು. ಈ ಸಂಸ್ಥೆಯು ರಾಜ್ಯದಲ್ಲಿ ಕೃಷಿಗೆ ಉತ್ತೇಜನ ನೀಡಲಿದೆಯೆಂದು ಅವರು ಹೇಳಿದರು. ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಪೌಲ್ಟ್ರಿ ಸಚಿವ ಪುರುಷೋತ್ತಮ್ ರೂಪಾಲಾ, ಸಹಾಯಕ ಕೃಷಿ ಸಚಿವರಾದ ಕೈಲಾಶ್ ಚೌಧುರಿ ಹಾಗೂ ಶೋಭಾ ಕರಂದ್ಲಾಜೆ ಮತ್ತು ಚತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.