ಕಟ್ಟುನಿಟ್ಟಿನ ಕ್ರಮ ಅಗತ್ಯ
ಮಾನ್ಯರೇ,
ಮತಾಂತರ, ಲವ್ ಜಿಹಾದ್ ಇಂದು ವ್ಯಾಪಕವಾಗಿ ಚರ್ಚೆಯಲ್ಲಿರುವ ವಿಷಯ. ಅದೆಷ್ಟೋ ವಿಷಯಗಳು ದುರುಪಯೋಗವಾಗುವಂತೆ ಇದನ್ನ್ನೂ ವ್ಯಾಪಕವಾಗಿ ದುರುಪಯೋಗ ಪಡಿಸಲಾಗುತ್ತಿದೆ.
ಬಲವಂತ, ಆಮಿಷದ ಮತಾಂತರ ಯಾರೇ ಮಾಡಿದರೂ ಅದಕ್ಕೆ ತಕ್ಕದಾದ ಶಿಕ್ಷೆ ನೀಡಬೇಕಾಗಿದೆ. ಆದರೆ ಅದನ್ನು ನೆಪವಾಗಿಟ್ಟುಕೊಂಡು ವ್ಯಕ್ತಿಯೊಬ್ಬ ತನ್ನ ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮವನ್ನು ಸ್ವೀಕರಿಸ ಬಯಸುವುದಾದರೆ ಅವನನ್ನು ತಡೆಯುವ ಯಾವುದೇ ಅಧಿಕಾರ ಮುಲ್ಲಾರವರಿಗಾಗಲಿ, ಹಿಂದೂ ಸ್ವಾಮೀಜಿಗಳಿಗಾಗಲಿ, ಕ್ರೈಸ್ತ ಪಾದ್ರಿಗಳಿಗಾಗಲಿ ಇಲ್ಲ. ಧರ್ಮದಲ್ಲಿ ಯಾವುದೇ ಬಲತ್ಕಾರ ಸಲ್ಲದು. ಯಾರೂ ಯಾವ ಧರ್ಮವನ್ನು ಇಚ್ಛಿಸಿ ಪಾಲಿಸಬಹುದು ಅಥವಾ ತೊರೆಯಬಹುದು. ಅದಕ್ಕೆ ಬಲವಂತಪಡಿಸುವ ಅಧಿಕಾರ ಯಾರಿಗೂ ಇಲ್ಲ. ಅದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಈ ಕುರಿತು ಕಾನೂನನ್ನು ಕೈಗೆತ್ತಿಕೊಳ್ಳುವ, ಕಾನೂನಿನ ವಿರುದ್ಧ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧವೂ ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಬೇಕು. ಈ ಕುರಿತು ಸಾಮಾಜಿಕ ಕಳಕಳಿಯುಳ್ಳ ಎಲ್ಲಾ ವಿಭಾಗದ ಜನರು ಗಮನಹರಿಸಬೇಕು. ಮಾತ್ರವಲ್ಲ ಇದು ಸ್ವಸ್ಥ ಸಮಾಜಕ್ಕೆ ಅನಿವಾರ್ಯ ಕೂಡ.





