ಯಶಸ್ವಿ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ: ಉತ್ತರ ಕೊರಿಯಾ ಹೇಳಿಕೆ

ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ (File Photo: PTI)
ಸಿಯೋಲ್ (ದಕ್ಷಿಣ ಕೊರಿಯಾ), ಸೆ.29: ಉತ್ತರ ಕೊರಿಯಾ ಹೈಪರ್ಸಾನಿಕ್ ಗ್ಲೈಡಿಂಗ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಸರ್ಕಾರಿ ಮಾಧ್ಯಮ ಪ್ರಕಟಿಸಿದೆ. ಇದು ದೇಶದ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ಅಣ್ವಸ್ತ್ರಸಹಿತ ಕ್ಷಿಪಣಿ ಎನಿಸಿಕೊಂಡಿದೆ.
ಮಂಗಳವಾರ ನಡೆದ ಉಡಾವಣೆಗೆ ಅಪಾರ ಮಹತ್ವವಿದೆ ಎಂದು ಕೊರಿಯಾದ ಅಧಿಕೃತ ಕೇಂದ್ರೀಯ ಸುದ್ದಿ ಸಂಸ್ಥೆ ಹೇಳಿದೆ. ಇದರಿಂದಾಗಿ ಉತ್ತರ ಕೊರಿಯಾದ ರಕ್ಷಣಾ ಸಾಮರ್ಥ್ಯ ಸಾವಿರಪಟ್ಟು ಅಧಿಕವಾಗಲಿದೆ ಎಂದು ವಿಶ್ಲೇಷಿಸಿದೆ.
ಹೈಪರ್ಸಾನಿಕ್ ಕ್ಷಿಪಣಿಗಳು ಸಾಮಾನ್ಯ ಕ್ಷಿಪಣಿಗಳಿಗೆ ಹೋಲಿಸಿದರೆ ಅತಿ ವೇಗವಾಗಿ ಚಲಿಸಬಲ್ಲವು ಹಾಗೂ ಚುರುಕಾರಿ ಇರುತ್ತವೆ ಮಾತ್ರವಲ್ಲದೇ, ಅಮೆರಿಕ ಕೋಟ್ಯಂತರ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕ್ಷಿಪಣಿ ಸುರಕ್ಷಾ ವ್ಯವಸ್ಥೆಗೆ ಇದನ್ನು ಭೇದಿಸುವುದು ಕಷ್ಟಸಾಧ್ಯ ಎನ್ನಲಾಗಿದೆ.
ಜಗಂಗ್ ಪ್ರಾಂತ್ಯದಿಂದ ಇದನ್ನು ಉಡಾಯಿಸಲಾಗಿದ್ದು, ಕ್ಷಿಪಣಿಯ ಪಥದರ್ಶಕ ನಿಯಂತ್ರಣ ಮತ್ತು ಸ್ಥಿರತೆ ದೃಢಪಟ್ಟಿದೆ ಎಂದು ಕೆಸಿಎನ್ಎ ವಿವರಿಸಿದೆ.







