ಗದಗ: ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿದ ಪ್ರಕರಣ; ತಾಯಿ ಜೀವಂತ ಪತ್ತೆ, ಬಾಲಕಿ ನಾಪತ್ತೆ

ಗದಗ, ಸೆ.29: ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ್ದ ಪ್ರಕರಣದಲ್ಲಿ ಮೃತಪಟ್ಟಿದ್ದರು ಎಂದು ಶಂಕಿಸಲಾಗಿದ್ದ ತಾಯಿ ಹಾಗೂ 8 ವರ್ಷದ ಬಾಲಕಿಯ ಪೈಕಿ ಆರು ಗಂಟೆ ಕಾಲ ನದಿಯಲ್ಲಿ ಮುಳ್ಳುಗಂಟಿಗಳ ಮಧ್ಯೆ ಸಿಲುಕಿ ತಾಯಿ ಬದುಕುಳಿದ ಘಟನೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.
ಉಮಾದೇವಿ ಪಾರಾದವರು. ಇವರನ್ನು 6 ಗಂಟೆಗಳ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಆದರೆ ತಾಯಿ ಬಲವಂತವಾಗಿ ನದಿಗೆ ಎಸೆದಿದ್ದ 8 ವರ್ಷದ ಹೆಣ್ಣು ಮಗಳು ಶ್ರೇಷ್ಠಾ ಇನ್ನೂ ನಾಪತ್ತೆಯಾಗಿದ್ದಾಳೆ. ಆಕೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಉಮಾದೇವಿ ಇಂದು ಮುಂಜಾವ 8 ವರ್ಷದ ಮಗಳು ಶ್ರೇಷ್ಠಾ ಸೇರಿದಂತೆ 12 ಮತ್ತು 14 ವರ್ಷದ ಮತ್ತಿಬ್ಬರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿ ತಾನು ಕೂಡಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಈ ವೇಳೆ 12 ಮತ್ತು 14 ವರ್ಷದ ಮಕ್ಕಳಿಬ್ಬರು ಪಾರಾಗಿದ್ದರೆ, ಉಮಾದೇವಿ ಮತ್ತು ಶ್ರೇಷ್ಠಾ ನಾಪತ್ತೆಯಾಗಿದ್ದರು. ಅವರಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು 6 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದು, ಮಧ್ಯಾಹ್ನದ ವೇಳೆ ನದಿಯಲ್ಲಿ ಮುಳ್ಳು ಗಿಡಗಂಟಿಗಳ ನಡುವೆ ಸಿಲುಕಿದ ಸ್ಥಿತಿಯಲ್ಲಿ ಉಮಾದೇವಿ ಪತ್ತೆಯಾಗಿದ್ದಾರೆ. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.







