ಬಸ್ ಚಾಲಕನಿಗೆ ನಿಗಮದ ಡಿಸಿ ಅವಾಚ್ಯವಾಗಿ ನಿಂದಿಸಿದ್ದೆನ್ನಲಾದ ಆಡಿಯೋ ವೈರಲ್: ತಿರುಚಿದ ವೀಡಿಯೊ ಎಂದ ಡಿಸಿ
ಮಂಗಳೂರು: ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ ಪ್ರಕರಣ

ಮಂಗಳೂರು, ಸೆ.29: ದುರ್ನಡತೆ ತೋರಿದ ಆರೋಪದಲ್ಲಿ ಅಮಾನತುಗೊಂಡಿದ್ದ ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ (ಡಿಸಿ)ಯೊಂದಿಗೆ ನಡೆಸಿದ್ದು ಎನ್ನಲಾದ ಸಂಭಾಷಣೆಯ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಎಸ್ಸಾರ್ಟಿಸಿ ಚಾಲಕ ಮತ್ತು ನಿರ್ವಾಹಕರಾಗಿದ್ದ ಬಾಗಲಕೋಟೆಯ ಹುನಗುಂದ ಮೂಲದ ಚಾಲಕ ಸಂಗಪ್ಪ (49) ನಗರದ ಕುಂಟಿಕಾನದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಮಾನತುಗೊಂಡಿದ್ದ ಅವರು ಕೆಲಸಕ್ಕೆ ಮರಳಲು ವಾರ ಬಾಕಿ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಣ್ಣ ಸಂಗಪ್ಪರಿಗೆ ವಾರದ ಹಿಂದೆ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಊರಲ್ಲಿದ್ದ ಅಣ್ಣ ಮಂಗಳೂರಿಗೆ ಆಗಮಿಸಿದ್ದರು. ಆದರೆ ಕೆಲಸ ನೀಡದೆ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತು ರೂಮಲ್ಲಿದ್ದ ಇತರರ ಕಣ್ತಪ್ಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಎಸ್ಸಾರ್ಟಿಸಿ ಮೇಲಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಸಂಗಪ್ಪರ ಸಹೋದರ ಮಹೇಶ್ ಆರೋಪಿಸಿದ್ದರು. ಈ ನಡುವೆ ಸಂಗಪ್ಪ ಅವರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಜೊತೆ ಮಾತನಾಡಿದ್ದು ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿದೆ.
ಏನಿದೆ ಆಡಿಯೋದಲ್ಲಿ?:
ಸಂಗಪ್ಪ: ನಮಸ್ತೆ ಸರ್
ಡಿಸಿ: ಯಾರು?
ಸಂಗಪ್ಪ: ನಾನು ಸಂಗಪ್ಪ ಸರ್
ಡಿಸಿ: ಯಾವ ಸಂಗಪ್ಪ?
ಸಂಗಪ್ಪ: ಸರ್, ಕಾಲ್ ಬೀಳ್ತೀನಿ ಸರ್
ಡಿಸಿ: ಏಯ್! ಯಾವನೋ ಸಂಗಪ್ಪ ಅಂದರೆ
ಸಂಗಪ್ಪ: ಮೊನ್ನೆ ಕಿರಿಕಿರಿ ಆಗಿತ್ತಲ್ಲ
ಡಿಸಿ: ಬಂದು ಅಲ್ಲಿ ಚೇಂಬರ್ ಒಳಗೆ ಕಾಯಕೋತಾ ಬಿದ್ದೀರಬೇಕು. ಫೋನಲ್ಲಿ ಎಲ್ಲ ಮಾತಾಡೊಕೆ ಬರಬೇಡ
ಈ ವೇಳೆ ಡಿಸಿ ಎನ್ನಲಾದ ವ್ಯಕ್ತಿ ಚಾಲಕ ಎನ್ನಲಾದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇತ್ತ ಕರೆ ಮಾಡುತ್ತಿದ್ದ ವ್ಯಕ್ತಿ ಪರಿಪರಿಯಾಗಿ ಬೇಡಿಕೊಂಡರೂ ಡಿಸಿ ಎನ್ನಲಾದ ವ್ಯಕ್ತಿ ನಿಂದನೆ ಮುಂದುವರಿಸಿದ್ದ ಆಡಿಯೊ ಸದ್ಯ ಭಾರೀ ಸುದ್ದಿಯಾಗಿದೆ.
ವೈರಲ್ ಆಗಿರುವ ಆಡಿಯೊ ಸತ್ಯಕ್ಕೆ ದೂರವಾದುದು: ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ
ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿರುವ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಅರುಣ್, "ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ 2,500ಕ್ಕಿಂತ ಹೆಚ್ಚು ಸಿಬ್ಬಂದಿ ಇದ್ದಾರೆ. ಸಮಸ್ಯೆ ಹೇಳಿಕೊಂಡು ಸಾಕಷ್ಟು ಕರೆ ಬರುತ್ತವೆ. ಕೆಲವರು ಕುಡಿದು ಪದೇಪದೇ ತೊಂದರೆ ನೀಡುತ್ತಿರುತ್ತಾರೆ. ಯಾವಾಗಲೋ ಮಾತನಾಡಿದ ಆಡಿಯೊವನ್ನು ಈಗ ವೈರಲ್ ಮಾಡಲಾಗಿದೆ. ಆಡಿಯೊ ತಿರುಚಲಾಗಿದೆ. ವೈರಲ್ ಆಗಿರುವ ಆಡಿಯೊ ಸತ್ಯಕ್ಕೆ ದೂರವಾದುದು" ಎಂದು ಹೇಳಿದ್ದಾರೆ.







