ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ, ಇಲ್ಲದಿದ್ದರೆ ಜಲ ಸಮಾಧಿ ಆಗುತ್ತೇನೆ: ಆಚಾರ್ಯ ಮಹಾರಾಜ್
"ಭಾರತದ ಮುಸ್ಲಿಂ, ಕ್ರೈಸ್ತರ ರಾಷ್ಟ್ರೀಯತೆ ರದ್ದುಪಡಿಸಬೇಕು"

Photo: ANI
ಹೊಸದಿಲ್ಲಿ: ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ದಿನವಾದ ಅಕ್ಟೋಬರ್ ವೇಳೆಗೆ ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸಬೇಕು ಎಂದು ತಪಸ್ವಿ ಚವಾಣಿಯ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಒತ್ತಾಯಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾನು 'ಜಲ ಸಮಾಧಿ' ಆಗುವುದಾಗಿ ಆಚಾರ್ಯ ಮಹಾರಾಜ್ ಬೆದರಿಕೆ ಹಾಕಿದ್ದಾರೆ.
"ಅಕ್ಟೋಬರ್ 2 ರೊಳಗೆ ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸಬೇಕು ಎನ್ನುವುದು ನನ್ನ ಬೇಡಿಕೆ. ಬೇಡಿಕೆ ಈಡೇರದಿದ್ದಲ್ಲಿ ನಾನು ಸರಯೂ ನದಿಯಲ್ಲಿ ಜಲ ಸಮಾಧಿ ಆಗುವೆ’’ ಎಂದು ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅಯೋಧ್ಯೆಯಲ್ಲಿ ಹೇಳಿದರು. ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ರಾಷ್ಟ್ರೀಯತೆಯನ್ನು ಕೊನೆಗೊಳಿಸುವಂತೆ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು ಪ್ರಭಾವಿ ಸಂತ ಒತ್ತಾಯಿಸಿದರು.
ಆಚಾರ್ಯ ಅವರು ಈ ಹಿಂದೆ 15 ದಿನಗಳ ಕಾಲ ಉಪವಾಸ ಕೈಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಭರವಸೆ ಪಡೆದ ನಂತರವೇ ಉಪವಾಸ ಹಿಂಪಡೆದಿದ್ದರು. 2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಯಾರಿ ಆರಂಭಿಸುತ್ತಿರುವ ಸಮಯದಲ್ಲಿ ಈ ವಿವಾದಾತ್ಮಕ ಹೇಳಿಕೆಗಳು ಬಂದಿವೆ.