ಗೌತಮ್ ಗಂಭೀರ್ ಫೌಂಡೇಶನ್ ವಿರುದ್ಧದ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ತಡೆಯಾಜ್ಞೆ ವಿಧಿಸಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ: ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭ ಕೋವಿಡ್ ಔಷಧಿಗಳ ಅಕ್ರಮ ದಾಸ್ತಾನು ಮತ್ತು ವಿತರಣೆ ನಡೆಸಿದೆ ಎಂಬ ಆರೋಪ ಹೊತ್ತಿರುವ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಗೌತಮ್ ಗಂಭೀರ್ ಫೌಂಡೇಶನ್ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ
ದಿಲ್ಲಿಯ ಔಷಧಿ ನಿಯಂತ್ರಣ ಇಲಾಖೆಯು ದಿಲ್ಲಿ ನ್ಯಾಯಾಲಯದಲ್ಲಿ ಫೌಂಡೇಶನ್ ವಿರುದ್ಧ ದೂರು ದಾಖಲಿಸಿತ್ತು. ಕೋವಿಡ್ ಔಷಧಿಗಳ ಕೊರತೆಯ ನಡುವೆಯೇ ರಾಜಕರಣಿಗಳು ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್ ಸೂಚನೆಯನ್ವಯ ಈ ದೂರು ದಾಖಲಾಗಿತ್ತು. ಡಾ ದೀಪಕ್ ಸಿಂಗ್ ಎಂಬವರು ಹೈಕೋರ್ಟ್‍ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.
ಫೌಂಡೇಶನ್ ಹಾಗೂ ಅದರ ಸದಸ್ಯರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕೋರಿ ದಿಲ್ಲಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗಿತ್ತು. ನ್ಯಾಯಾಲಯವು ಔಷಧಿ ನಿಯಂತ್ರಕ ಇಲಾಖೆಗೂ ನೋಟಿಸ್ ಜಾರಿಗೊಳಿಸಿದೆಯಲ್ಲದೆ ಅದರ ಪ್ರತಿಕ್ರಿಯೆಯನ್ನೂ ಕೋರಿದೆ. ಮುಂದಿನ ವಿಚಾರಣೆ ಡಿಸೆಂಬರ್ 8ರಂದು ನಿಗದಿಯಾಗಿದೆ.
ದಿಲ್ಲಿ ಪೊಲೀಸರು ನೀಡಿದ ಮಾಹಿತಿಯಂತೆ ಫೌಂಡೇಶನ್ 2,628 ಸ್ಟ್ರಿಪ್ಸ್ ಫ್ಯಾಬಿಫ್ಲೂ ಖರೀದಿಸಿತ್ತು. ಇವುಗಳಲ್ಲಿ 2,343 ಸ್ಟ್ರಿಪ್ಸ್ ಗಳನ್ನು ವಿತರಿಸಿ ಉಳಿದ 285 ಸ್ಟ್ರಿಪ್ಸ್ ಅನ್ನು ದಿಲ್ಲಿ ಸರಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆ ನೀಡಲಾಗಿತ್ತು.







