ಆದಿತ್ಯನಾಥ್ ಹೆಸರಿನ ಫಲಕಕ್ಕೆ ಕಪ್ಪು ಬಣ್ಣ ಬಳಿದ ಆರೋಪ: 150ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲು

ಲಕ್ನೋ: ಒಂಬತ್ತನೇ ಶತಮಾನದ ಅರಸ ಮಿಹಿರ್ ಭೋಜ್ ಎಂಬಾತನ ಪ್ರತಿಮೆಯ ಕೆಳಭಾಗದಲ್ಲಿ ಅಳವಡಿಸಲಾದ ಫಲಕದಲ್ಲಿ ಬರೆಯಲಾಗಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೆಸರಿಗೆ ಕಪ್ಪು ಬಣ್ಣ ಬಳಿದ ಆರೋಪದಲ್ಲಿ ಪೊಲೀಸರು 150 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರತಿಮೆಯನ್ನು ಮುಖ್ಯಮಂತ್ರಿ ಸೆಪ್ಟೆಂಬರ್ 22ರಂದು ಅನಾವರಣಗೊಳಿಸಿದ್ದರು.
ಆರೋಪಿಗಳು ದಾದ್ರಿ ಶಾಸಕ ತೇಜಪಾಲ್ ನಗರ್, ರಾಜ್ಯಸಭಾ ಸಂಸದ ಸುರೇಂದ್ರ ನಗರ್ ಹಾಗೂ ರಾಜ್ಯ ಸಚಿವ ಅಶೋಕ್ ಕಟಾರಿಯಾ ಅವರ ಹೆಸರುಗಳಿಗೂ ಕಪ್ಪು ಬಣ್ಣ ಬಳಿದಿದ್ದಾರೆ ಎನ್ನಲಾಗಿದೆ. ಪ್ರತಿಮೆಯಿರುವ ಸ್ಥಳದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ 15 ಅಡಿ ಎತ್ತರದ ಪ್ರತಿಮೆಯ ಕೆಳಭಾಗದಲ್ಲಿ ಅಳವಡಿಸಲಾದ ಫಲಕದಲ್ಲಿ ರಾಜನ ಹೆಸರಿನ ಪಕ್ಕ ತಮ್ಮ ಜಾತಿಯ ಹೆಸರನ್ನು ತೆಗೆದುಹಾಕಿರುವುದನ್ನು ಗುರ್ಜರ್ ಸಮುದಾಯದ ಸದಸ್ಯರು ವಿರೋಧಿಸಿದ್ದರಿಂದ ಈ ಪ್ರತಿಮೆ ಅನಾವರಣಗೊಂಡಂದಿನಿಂದ ವಿವಾದಕ್ಕೀಡಾಗಿತ್ತು.
ಅರಸ ಮಿಹಿರ್ ಭೋಜ್ ತಮ್ಮ ಸಮುದಾಯಕ್ಕೆ ಸೇರಿದವನು ಎಂದು ಗುರ್ಜರ್‍ಗಳು ಹಾಗೂ ರಜಪೂತರು ಹೇಳುತ್ತಿರುವುದೇ ಇದಕ್ಕೆ ಕಾರಣ. ಈಗ ಗುರ್ಜರ್ ಸಮುದಾಯದ ಹೆಸರನ್ನು ಫಲಕದಲ್ಲಿ ಮತ್ತೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ಗುರ್ಜರ್ ಹೆಸರನ್ನು ಏಕೆ ತೆಗೆಯಲಾಗಿತ್ತು ಅಂದು ಅಖಿಲ್ ಭಾರತೀಯ ಗುರ್ಜರ್ ಫ್ರಂಟ್ ಅಧ್ಯಕ್ಷ ನವೀನ್ ಭಟಿ ಪ್ರಶ್ನಿಸಿದ್ದಾರೆ. "ಮಿಹಿರ್ ಭೋಜ್ ಹೆಸರಿಗೆ ಗುರ್ಜರ್ ಸೇರಿಸಲಾಗಿದೆ ಎಂದು ಸರಕಾರ ಅಧಿಕೃತವಾಗಿ ಅಧಿಸೂಚನೆ ಮೂಲಕ ಘೋಷಿಸಿದರೆ ಮಾತ್ರ ನಾವು ಪ್ರತಿಭಟನೆ ಕೈಬಿಡುತ್ತೇವೆ" ಎಂದು ಅವರು ಹೇಳಿದರು.
ಮುಂದಿನ ಹೋರಾಟದ ಕುರಿತು ಚರ್ಚಿಸಲು ಸಂಘಟನೆ ಅಕ್ಟೋಬರ್ 2ರಂದು ಗ್ರೇಟರ್ ನೊಯ್ಡಾದಲ್ಲಿ ರಾಷ್ಟ್ರ ಮಟ್ಟದ ಸಭೆಯನ್ನು ಕರೆದಿದೆ. ತರುವಾಯ ರಜಪೂತ ಸಮುದಾಯದ ಸದಸ್ಯರೂ ರಾಜನ ಹೆಸರಿಗೆ ಗುರ್ಜರ್ ಸೇರಿಸಿರುವುದರ ಕುರಿತು ಚರ್ಚಿಸಲು ರವಿವಾರ ಸಭೆ ನಡೆಸಲಿದ್ದಾರೆಂಬ ಮಾಹಿತಿಯಿದೆ.