ಪಾಂಡೇಶ್ವರ ಕೊರಗ ಕಾಲನಿಗೆ ಬ್ರಹ್ಮಾವರ ತಹಶೀಲ್ದಾರ್ ಭೇಟಿ; ಅರ್ಹರಿಗೆ ಹಕ್ಕು ಪತ್ರ ವಿತರಣೆಯ ಭರವಸೆ

ಕೋಟ, ಸೆ. 29: ಯಾವುದೇ ಸಮಾಜ ಅಥವಾ ಸಮುದಾಯಕ್ಕೂ ಸೌಲಭ್ಯಗಳನ್ನು ಮಾತ್ರ ಕೊಟ್ಟು ಉದ್ಧಾರ ಮಾಡುವುುದು ಅಸಾಧ್ಯ. ಅದರ ಜೊತೆಗೆ ಆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣದ ಪ್ರಾಮುಖ್ಯತೆಯ ಅರಿವು ಮೂಡಿಸಬೇಕು. ಶಿಕ್ಷಿತ ಸದಸ್ಯರೇ ಮುಂದೆ ಸಮಾಜದ ಬೆಳಕಾಗುತ್ತಾರೆ ಎಂದು ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಹೇಳಿದ್ದಾರೆ.
ಬುಧವಾರ ಸಾಸ್ತಾನದ ಪಾಂಡೇಶ್ವರ ಕೊರಗ ಕಾಲೊನಿಗೆ ಭೇಟಿ ನೀಡಿ, ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ನಂತರ ಅವರು ಮಾಧ್ಯಮ ದವರೊಂದಿಗೆ ಮಾತನಾಡಿದರು. ಪಾಂಡೇಶ್ವರದ ಕೊರಗ ಕಾಲನಿಯಲ್ಲಿ ಕೆಲವು ಕುಟುಂಬಗಳು ಭೂಮಿಯ ಹಕ್ಕುಪತ್ರವಿಲ್ಲದೆ ಪರಿತಪಿಸುತ್ತಿರುವ ವಿಷಯ ತಿಳಿದ ತಹಶೀಲ್ದಾರರು ಕಾಲೊನಿಗೆ ಭೇಟಿ ನೀಡಿ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.
ಸಮಸ್ಯೆ ಎದುರಿಸುತ್ತಿರುವ ಕೊರಗ ಕುಟುಂಬಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ರಾಜಶೇಖರ ಮೂರ್ತಿ, ನಿಯಮಾವಳಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರ ನೀಡುವುದಾಗಿಯೂ, ಪದವಿ ಪಡೆದ ಕೊರಗ ಮಕ್ಕಳಿಗೆ ಸರಕಾರಿ ಉದ್ಯೋಗ ದೊರಕಿಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಯತ್ನಿಸುವುದಾಗಿಯೂ ಭರವಸೆ ನೀಡಿದರು.
ಕಾಲನಿಯ ಸಮಸೆಗಳನ್ನು ಕೇಳಿ ಪಟ್ಟಿಮಾಡಿದ ಅವರು, ಸರಕಾರಿ ಜಾಗದಲ್ಲಿರುವ ಕೊರಗ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸಮಸ್ಯೆಯಿಲ್ಲ. ಆದರೆ, ಪಟ್ಟಾ ಜಮೀನಿನಲ್ಲಿ ವಾಸಿಸುತ್ತಿರುವವರು ಪಟ್ಟಾ ಭೂಮಾಲಿಕರ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕಾಗುತ್ತದೆ ಎಂದರು.
ನಾಲ್ಕು ಕೊರಗ ಕುಟುಂಬಗಳು ಗೋಮಾಳದಲ್ಲಿ ನೆಲೆಸಿದ್ದಾರೆ. ಅವರಿಗೆ ವಿರಹಿತಪಡಿಸಿ ಹಕ್ಕುಪತ್ರ ಮಂಜೂರು ಮಾಡಲಾಗುವುದು. ಈಗಾಗಲೇ ಕಂದಾಯ ಇಲಾಖೆಗೆ ಕಾಗದ ಪತ್ರ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದ ಅವರು, ಕಂದಾಯ ಇಲಾಖೆಯ ನಿಯಮಾವಳಿಯಂತೆ ಕ್ರಮ ಕೈಗೊಳ್ಳಲಾ ಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಕಲ್ಪನಾ ದಿನಕರ, ಉಪಾಧ್ಯಕ್ಷ ಸಿಲ್ವಸ್ಟರ್ ಡಿಸೋಜಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್ಲಾ ಬೇಗಂ, ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್, ಪ್ರತಾಪ್ ಶೆಟ್ಟಿ, ವೈ. ಬಿ. ರಾಘವೇಂದ್ರ, ಸುಶೀಲ ಪೂಜಾರ್ತಿ ಹಾಗೂ ಆರ್‌ಜಿಪಿಆರ್‌ಎಸ್ ಅಧ್ಯಕ್ಷೆ ರೋಷನಿ ಒಲಿವೇರಾ ಮುಂತಾದವರು ಉಪಸ್ಥಿತರಿದ್ದರು.










