ಮಂಗಳೂರಿಗೆ ರಾಷ್ಟ್ರಪತಿ ಭೇಟಿ; ಶಿಷ್ಟಾಚಾರದಂತೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು, ಸೆ.29: ಮುಂಬರುವ ಅ.6ರಿಂದ 9ರವರೆಗೆ ರಾಜ್ಯದ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅ.7 ಹಾಗೂ 8ರಂದು ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಅದಕ್ಕಾಗಿ ಶಿಷ್ಟಾಚಾರದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿಗಳ ರಾಜ್ಯ ಭೇಟಿಯ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಿಂದ ಏರ್ಪಡಿಸಲಾಗಿದ್ದ ವೀಡಿಯೊ ಸಂವಾದದಲ್ಲಿ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ರಾಷ್ಟ್ರಪತಿಗಳ ತಂಗುವಿಕೆಗಾಗಿ ಕೈಗೊಳ್ಳುವ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
ಅ.7-8ರಂದು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುವ ರಾಷ್ಟ್ರಪತಿಗೆ, ಅವರ ಕಚೇರಿಯ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ವಾಸ್ತವ್ಯ, ಊಟೋಪಚಾರ ಹಾಗೂ ಅವರೊಂದಿಗೆ ಆಗಮಿಸುವ ಅಧಿಕಾರಿಗಳು, ಸಿಬ್ಬಂದಿಗೂ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯ ಅತಿಥಿಗೃಹವನ್ನು ಮತ್ತಷ್ಟು ಸ್ವಚ್ಛ ಪಡಿಸುವುದು, ಅಲ್ಲಿನ ಪೀಠೋಪಕರಣ, ಕರ್ಟನ್, ಅಡುಗೆ ಕೋಣೆ ಸೇರಿದಂತೆ ಅಲ್ಲಿನ ಅಗತ್ಯತೆಗಳನ್ನು ಪರಿಶೀಲಿಸಿ, ಉತ್ತಮ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಡಿಸಿ ಹೇಳಿದ್ದಾರೆ.
ಅದೇರೀತಿ ಊಟೋಪಚಾರ ಸಿದ್ಧಪಡಿಸಲು ಹಾಗೂ ಉಣಬಡಿಸಲು ಕೂಡ ಅನುಭವಿಗಳನ್ನು ನಿಯೋಜಿಸಲಾಗುವುದು. ಉಳಿದಂತೆ ಭದ್ರತೆ, ಏರ್‌ರ್ಪೋರ್ಟ್‌ನಿಂದ ವಾಸ್ತವ್ಯದ ಅತಿಥಿಗೃಹದವರೆಗೆ ಕರೆತರುವ ಹಾದಿಯಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಅತಿಥಿಗೃಹದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಆಗಾಗ ಭೇಟಿ ನೀಡಿ, ತಪಾಸಣೆ ಮಾಡಲಾಗುವುದು ಎಂದರು.
ಆ್ಯಂಬುಲೆನ್ಸ್, ವೈದ್ಯರ ತಂಡ ಸಿದ್ಧವಿದೆ. ಸಂಪರ್ಕ ರಸ್ತೆಗಳಲ್ಲಿ ದುರಸ್ತಿ ಇದ್ದಲ್ಲಿ ಕೂಡಲೇ ಮಾಡಿಸಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಲಾಗಿದೆ. ಮುಖ್ಯವಾಗಿ ಕೋವಿಡ್ ನಿಯಮಾವಳಿ ಅನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಲೋಪಗಳಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಆಹಾರ ಸುರಕ್ಷತೆ ಅಧಿಕಾರಿಗಳು ಸ್ಥಳದಲ್ಲಿಯೇ ಇರಲಿದ್ದಾರೆ. ಮೆಸ್ಕಾಂನಿಂದ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಹರಿರಾಮ್ ಶಂಕರ್, ಮೆಸ್ಕಾಂ ಎಂಡಿ ಪ್ರಶಾಂತ್ ಮಿಶ್ರ, ಸಹಾಯಕ ಆಯುಕ್ತ ಮದನ್ ಮೋಹನ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಯಶವಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಪತಿ ಅ.8ರಂದು ಶೃಂಗೇರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







