ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ: ಅಬ್ದುಲ್ ಅಝೀಮ್

ಕಲಬುರಗಿ, ಸೆ.29: ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಿರಿಸಿದ ಶೇ.15ರಷ್ಟು ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಲಬುರಗಿ ಅಲ್ಪಸಂಖ್ಯಾತರ ಇಲಾಖೆಯ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ವಿದೇಶಿ ಅಧ್ಯಯನ ಪ್ರವಾಸ, ಅರಿವು ಯೋಜನೆ ಸೇರಿದಂತೆ ಅಲ್ಪಸಂಖ್ಯಾತರ ಯೋಜನೆಗಳ ಅನುದಾನ ಕಡಿತ ಮಾಡಿರುವುದನ್ನು ಪುನಃ ನೀಡಬೇಕು. ಜೊತೆಗೆ ಈ ಸಮುದಾಯಗಳಿಗೆ ಈಗಾಗಲೇ ನೀಡಲಾಗುವ ಅನುದಾನವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸಪ್ತಪದಿ ಯೋಜನೆಯಡಿ 70 ಸಾವಿರ ರೂ. ನೀಡಲಾಗುತ್ತಿದ್ದು, ಅದೇ ರೀತಿ ಶಾದಿ ಭಾಗ್ಯ ಯೋಜನೆಗೂ ಅಷ್ಟೇ ಮೊತ್ತದ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಶೇ.12ರಷ್ಟು ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದ ಅವರು, ಅಲ್ಪಸಂಖ್ಯಾತರ ಶಾಲಾ ಕಾಲೇಜುಗಳ ಶಿಕ್ಷಕರು ಬೇಜವಾಬ್ದಾರಿಯಿಂದ ಗೈರಾಗಿದ್ದರೆ, ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತ ಸಮುದಾಯಗಳ ಕೇಂದ್ರೀಕೃತ ಸ್ಲಂಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಗತಿಕರಿಗೆ ವಸತಿ ಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ವಕ್ಫ್‍ಗೆ ಸೇರಿದ 94 ಎಕರೆ 10 ಗುಂಟೆ ಆಸ್ತಿಯನ್ನು ಮುತವಲ್ಲಿಗಳು ಮಾರಾಟ ಮಾಡಿದ್ದು, 1995 ವಕ್ಫ್ ಕಾಯ್ದೆ ಸೆಕ್ಷನ್ 54ರಡಿ ಮತ್ತೆ ವಕ್ಫ್ ಬೋರ್ಡ್‍ಗೆ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ಅಬ್ದುಲ್ ಅಝೀಮ್ ತಿಳಿಸಿದರು.
ಅದೇ ರೀತಿ ಜಿಲ್ಲೆಯಲ್ಲಿ ವಕ್ಫ್‍ಗೆ ಸೇರಿದ 247 ಎಕರೆ 27 ಗುಂಟೆ ಜಮೀನು ಅತಿಕ್ರಮಣವಾಗಿದ್ದು, ಈ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು. ಇನ್ನು ಕಲಬುರಗಿಯ ನಗರದ ವಿವಿಧ ಮೊಹಲ್ಲಾಗಳಲ್ಲಿ ಮೂಲ ಸೌಕರ್ಯಗಳಿಗೆ ಕೊರತೆಯಿದ್ದು, ಸಂಬಂಧಿಸಿದ ಇಲಾಖೆಯವರು ಗಮನಹರಿಸಿ ಅಭಿವೃದ್ಧಿ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲೆಯು ವಿವಿಧ ವೈವಿಧ್ಯತೆಯಿಂದ ಕೂಡಿದ್ದು, ರಾಜ್ಯದಲ್ಲಿ ಅತ್ಯಂತ ಸೌಹಾರ್ದತೆಯ ನಾಡು ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗಾಗಿ ಕೋಮು ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಗೆ ಅಬ್ದುಲ್ ಅಝೀಮ್ ಸೂಚಿಸಿದರು.
ಈ ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ್, ಕನೀಝ್ ಫಾತಿಮಾ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಪ್ ಶಶಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







