ಐಪಿಎಲ್:ಬೆಂಗಳೂರು ಗೆಲುವಿಗೆ 150 ರನ್ ಗುರಿ ನೀಡಿದ ರಾಜಸ್ಥಾನ
ಲೆವಿಸ್ ಅರ್ಧಶತಕ, ಹರ್ಷಲ್ ಪಟೇಲ್ ಗೆ 3 ವಿಕೆಟ್

ಹರ್ಷಲ್ ಪಟೇಲ್, photo: twitter
ದುಬೈ:ಆರಂಭಿಕ ಬ್ಯಾಟ್ಸ್ ಮನ್ ಎವಿನ್ ಲೆವಿಸ್ ಅರ್ಧಶತಕದ(58, 37 ಎಸೆತ, 5 ಬೌಂಡರಿ, 3 ಸಿಕ್ಸರ್)ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ನ 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ತಂಡದ ಗೆಲುವಿಗೆ 150 ರನ್ ಸವಾಲು ನೀಡಿದೆ.
ಟಾಸ್ ಜಯಿಸಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ರಾಜಸ್ಥಾನವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದರು. ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 149 ರನ್ ಗಳಿಸಿತು.
ಮೊದಲ ವಿಕೆಟ್ ಗೆ 8.2 ಓವರ್ ಗಳಲ್ಲಿ 77 ರನ್ ಗಳಿಸಿದ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್(31, 22 ಎಸೆತ, 3 ಬೌಂ. 2 ಸಿ.)ಉತ್ತಮ ಆರಂಭ ಒದಗಿಸಿಕೊಟ್ಟರು. ಡ್ಯಾನ್ ಕ್ರಿಸ್ಟಿಯನ್ ಈ ಜೋಡಿಯನ್ನು ಬೇರ್ಪಡಿಸಿದರು. ಈ ಇಬ್ಬರು ಬೇರ್ಪಟ್ಟ ಬಳಿಕ ನಾಯಕ ಸಂಜು ಸ್ಯಾಮ್ಸನ್(19) ಹಾಗೂ ಕ್ರಿಸ್ ಮೊರಿಸ್(14) ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್ ಮನ್ ಎರಡಂಕೆಯ ಸ್ಕೋರ್ ಗಳಿಸದೇ ಇರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದ ಹರ್ಷಲ್ ಪಟೇಲ್ 34 ರನ್ ಗೆ 3 ವಿಕೆಟ್ ಪಡೆದು ಮತ್ತೊಮ್ಮೆ ಮಿಂಚಿದರು. ಯಜುವೇಂದ್ರ ಚಹಾಲ್ (2-18) ಹಾಗೂ ಶಹಬಾಝ್ ನದೀಂ(2-10) ತಲಾ ಎರಡು ವಿಕೆಟ್ ಗಳನ್ನು ಉರುಳಿಸಿದರು.





