ಗೋಮಾಳದ ಜಾಗ ಗೋವುಗಳ ಮೇವಿಗೆ ಮಾತ್ರ ಮೀಸಲಿರಲಿ : ಪೇಜಾವರ ಶ್ರೀ ಆಗ್ರಹ
ಉಡುಪಿ, ಸೆ.29: ಬಿಟ್ರಿಷ್ ಕಾಲದಿಂದಲೂ ಗ್ರಾಮೀಣ ಪ್ರದೇಶವೂ ಸೇರಿದಂತೆ ಎಲ್ಲಾ ಕಡೆಯಲ್ಲಿರುವ ಗೋಮಾಳದ ಭೂಮಿಯನ್ನು ಜಾನು ವಾರುಗಳ ಮೇವು, ಪಾಲನೆಗೆ ಮೀಸಲಿಡಬೇಕು. ಇದಕ್ಕಾಗಿ ಪ್ರತಿ ಗ್ರಾಮಗಳಲ್ಲಿರುವ ಗೋಮಾಳ ಜಾಗವನ್ನು ಜಿಲ್ಲಾಡಳಿತ ಗುರುತಿಸಿ ಕಾದಿರಿಸಬೇಕು ಎಂದು ಪೇಜಾವರ ಮಠಾಧೀಶರೂ, ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಶ್ರೀವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.
ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಬುಧವಾರ ಕರೆದ ಮಾತನಾಡಿದ ಅವರು, ಗೋಸಂತತಿಯನ್ನು ಉಳಿಸುವ ಮತ್ತು ಬೆಳೆ ಸುವ ಕಾರ್ಯ ಉಡುಪಿಯಿಂದಲೇ ಆರಂಭವಾಗಬೇಕೆಂಬ ಆಶಯದೊಂದಿಗೆ ನಾವೀ ಒತ್ತಾಯ ಮಾಡುತಿದ್ದೇವೆ ಎಂದರು.
ಜಿಲ್ಲೆಯ 233 ಗ್ರಾಮಗಳಲ್ಲಿ 3000 ಎಕರೆಯಷ್ಟು ಗೋಮಾಳದ ಭೂಮಿಗಳಿದ್ದು, ಅವುಗಳ ಗಡಿ ಗುರುತು ಮಾಡಬೇಕು. ಗೋಮಾಳಗಳನ್ನು ಕೇವಲ ಗೋವುಗಳಿಗಾಗಿ ಮೀಸಲಿಟ್ಟು, ಅವುಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಗ್ರಾಮಗಳಲ್ಲಿರುವ ಗೋಮಾಳದ ಜಮೀನನ್ನು ಆಯಾ ಗ್ರಾಮದ ಗೋವುಗಳ ಪಾಲನೆ ಗೆ ಮಾತ್ರ ಒದಗಿಸಬೇಕು. ಈ ಬಗ್ಗೆ ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದರು.
ಗೋ ಹಿತರಕ್ಷಣಾ ಒಕ್ಕೂಟ ಉಡುಪಿ ಜಿಲ್ಲಾ ಸಂಚಾಲಕ ಗಣೇಶ್ ಕಿಣಿ ಬೆಳ್ವೆ, ಕಾರ್ಯದರ್ಶಿ ವಿಜಯ್ ಪ್ರಕಾಶ್ ಬೈಲಕೆರೆ, ಶ್ರೀನಿವಾಸ್ ಶೆಟ್ಟಿಗಾರ್ ಬಾರ್ಕೂರು, ಡಾ. ಅಣ್ಣಯ್ಯ ಕುಲಾಲ್, ಸೂರ್ಯನಾರಾಯಣ ಗಾಣಿಗ ಮಟಪಾಡಿ, ಕೃಷ್ಣಾನಂದ ಛಾತ್ರ, ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ, ಭಾಸ್ಕರ್ ಶೆಟ್ಟಿ ನಾವುಂದ, ಶ್ರೀಧರ ಆಚಾರ್ಯ ಕುಮ್ರಗೋಡು, ಶಶಾಂಕ್ ಶಿವತ್ತಾಯ, ವಿಶ್ವನಾಥ್ ನಾಯ್ಕಾ ನಡೂರು, ಚಂದ್ರಶೇಖರ ಹೆಗ್ಡೆ ಶಾನಾಡಿ, ಶಂಕರ್ ಹೆಗ್ಡೆ ಜನ್ನಾಡಿ ಉಪಸ್ಥಿತರಿದ್ದರು.
ಗೋಕಳ್ಳತನ: ಕಠಿಣ ಕಾನೂನು ಜಾರಿಯಾಗಲಿ
ಜಿಲ್ಲೆಯಾದ್ಯಂತ ಗೋವುಗಳ ಕಳ್ಳತನ ನಡೆಯುತಿತಿದ್ದು, ಈ ಬಗ್ಗೆ ಸರಕಾರ ಕೂಡಲೇ ಕಠಿಣ ಕಾನೂನು ಜಾರಿ ಮಾಡಬೇಕು. ಹಸುಗಳ ಹಾಲು ಮಾರಾಟ ಮಾಡಿ ಬದುಕು ಸಾಗಿಸುವ ರೈತರ ಕೊಟ್ಟಿಗೆಗೆ ನುಗ್ಗಿ, ತಲವಾರು ತೋರಿಸಿ ಹೆದರಿಸಿ ಕೃತ್ಯ ಎಸಗುವ ಕಿಡಿಗೇಡಿಗಳಿಗೆ ಶಿಕ್ಷೆ ವಿಧಿಸಬೇಕು. ಇಂತಹ ಘಟನೆ ಜಿಲ್ಲೆಯಲ್ಲಿ ಮರುಕಳುಹಿಸಬಾರದು ಎಂದು ಶ್ರೀಗಳು ಆಗ್ರಹಿಸಿದರು.
13 ವರ್ಷದ ಮೇಲೆ ಬಾಲಸನ್ಯಾಸವಲ್ಲ
ಶಿರೂರು ಮಠದ ಪೀಠಾಧಿಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಪೇಜಾವರ ಶ್ರೀಗಳನ್ನು ಪ್ರಶ್ನಿಸಿದಾಗ, ಧಾರ್ಮಿಕ ದೃಷ್ಟಿಯಿಂದ 13 ವರ್ಷ ಮೇಲ್ಪಟ್ಟು ಸನ್ಯಾಸಿ ದೀಕ್ಷೆ ತೆಗೆದುಕೊಂಡರೆ ಅದು ಬಾಲ ಸನ್ಯಾಸವಾಗುವುದಿಲ್ಲ. ಈ ಅವಧಿಯಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಬಹುದು ಎಂದರು.
ಧಾರ್ಮಿಕ ದೃಷ್ಟಿಯಿಂದ ಪ್ರೌಢತೆ ಎನ್ನುವುದು ಆರಂಭದಲ್ಲಿ 8 ವರ್ಷ, ಆ ಬಳಿಕ ಆಣಿಮಾಂಡವ್ಯ ಎಂಬ ಮಹರ್ಷಿಗಳು ಇದನ್ನು 13 ವರ್ಷಕ್ಕೆ ವಿಸ್ತರಿಸಿದ್ದರು. ಈ ಬಗ್ಗೆ ಮಹಾಭಾರತದಲ್ಲೂ ಉಲ್ಲೇಖವಿದೆ. ಆದ್ದರಿಂದ 13 ವರ್ಷದ ಬಳಿಕ ಕೊಟ್ಟ ದೀಕ್ಷೆ ಬಾಲಸನ್ಯಾಸ ಆಗುವುದಿಲ್ಲ. ಹೀಗಾಗಿ ನ್ಯಾಯಾಲಯದ ತೀರ್ಪನ್ನು ತಾವು ಸ್ವಾಗತಿಸುವುದಾಗಿ ಪೇಜಾವರಶ್ರೀ ಹೇಳಿದರು.







